ಬಳ್ಳಾರಿ: ಸರ್ಕಾರ ಸಾಕಷ್ಟು ಪೂರ್ವಭಾವಿ ಕ್ರಮ ಕೈಗೊಂಡಿದ್ದರೂ ಜಿಲ್ಲೆಯ 3 ವ್ಯಕ್ತಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ನಿನ್ನೆಯಿಂದ ಜಿಲ್ಲೆಯಾದ್ಯಂತ ಅದರಲ್ಲೂ ಹೊಸಪೇಟೆ ಸುತ್ತಮುತ್ತ ದಿಗ್ಬಂಧನವನ್ನು ( ಕರ್ಫ್ಯೂ) ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಇದರಿಂದ ತಾತ್ಕಾಲಿಕವಾಗಿ ಕೆಲ ಅಡಚಣೆಗಳಾದರೂ ನಾಡಿನ ಸಮಸ್ತ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಈ ಬಗ್ಗೆ ಸೂಕ್ತ ಸಹಕಾರ ನೀಡಬೇಕೆಂದು ನಾನು ಸಾರ್ವಜನಿಕರಲ್ಲಿ ಮತ್ತೊಮ್ಮೆ ಕಳಕಳಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.
ಈ ಸೋಂಕಿನ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಈಗಾಗಲೇ ನಾನು ಬಳ್ಳಾರಿ ಜಿಲ್ಲಾಡಳಿತ, ಪೊಲೀಸ್ ಮತ್ತು ಆರೋಗ್ಯ ಇಲಾಖೆಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಅಗತ್ಯವಾದ ಎಲ್ಲಾ ನೆರವು ಮತ್ತು ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ನಾನು ಖುದ್ದಾಗಿ ಬಳ್ಳಾರಿ ಜಿಲ್ಲೆಗೆ ಬಂದು ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸಿದ್ದೇನೆ. ಕೊರೊನಾ ಸೋಂಕಿತರಿಗೆ ಪ್ರತ್ಯೇಕ ವಾರ್ಡುಗಳನ್ನು ತೆರೆಯುವುದರೊಂದಿಗೆ ಶಂಕಿತ ವ್ಯಕ್ತಿಗಳಿಗೆ ಪ್ರತ್ಯೇಕ ಸೌಲಭ್ಯ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಆದರೆ, ಇವೆಲ್ಲವುಗಳಿಗಿಂತ ಹೆಚ್ಚಾಗಿ ಸಾರ್ವಜನಿಕರು ವಹಿಸುವ ಮುನ್ನೆಚ್ಚರಿಕೆ, ಕರ್ಫ್ಯೂ ಪಾಲನೆ, ಮಾಸ್ಕ್ ಬಳಕೆ, ಸ್ವಚ್ಛತೆ ಕಾಪಾಡುವುದು, ವ್ಯಕ್ತಿಗಳಿಂದ ವ್ಯಕ್ತಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ವಾಹನ ಮತ್ತು ಸ್ವಯಂ ಸಂಚಾರಗಳಿಗೆ ಕಡಿವಾಣ. ಈ ಮುಂತಾದ ಸ್ವಯಂ ನಿಯಂತ್ರಣ ಅನುಸರಿಸುವುದೇ ಸಮರ್ಪಕ ಮಾರ್ಗ. ಈ ನಿಟ್ಟಿನಲ್ಲಿ ನಾವೆಲ್ಲರೂ ಹೆಚ್ಚು ಜಾಗೃತರಾಗಿ ಈ ಪಿಡುಗಿನ ಸವಾಲನ್ನು ಸಮರ್ಥವಾಗಿ ಎದುರಿಸೋಣ ಎಂದು ಅವರು ಕರೆ ನೀಡಿದ್ದಾರೆ.