ಹೊಸಪೇಟೆ (ಬಳ್ಳಾರಿ): ಅತ್ಯಾಚಾರ ಮತ್ತು ಬರ್ಬರವಾಗಿ ಹತ್ಯೆಗೊಳಗಾಗಿರುವ ಬಾಲಕಿ ಕುಟುಂಬಕ್ಕೆ ಮಂಡ್ಯ ಜಿಲ್ಲಾಡಳಿತದಿಂದ 8 ಲಕ್ಷ ರೂ. ಪರಿಹಾರ ನೀಡಲಾಗಿದೆ. ಈ ಹಣವನ್ನು ಬಾಲಕಿ ತಾಯಿಯ ಬ್ಯಾಂಕ್ ಖಾತೆ ತೆರೆದು ಜಮಾ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದ್ದಾರೆ.
ಹೊಸಪೇಟೆ ತಾಲೂಕಿನ ತಾಳೆ ಬಸಾಪುರ ತಾಂಡಾದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮದ್ದೂರು ತಾಲೂಕಿನ ಹುರುಗಲವಾಡಿ ಗ್ರಾಮದಲ್ಲಿ ಕಬ್ಬಿನ ಗದ್ದೆಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಕಾಮುಕರು ಬಳಿಕ ಬರ್ಬರವಾಗಿ ಕೊಂದಿದ್ದಾರೆ. ಈ ಪ್ರಕರಣದಲ್ಲಿ ಎಷ್ಟು ಜನ ಭಾಗಿಯಾಗಿದ್ದರೆ ಎನ್ನುವುದು ತಿಳಿದಿಲ್ಲ. ಮಂಡ್ಯದಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ಒಬ್ಬನನ್ನು ಬಂಧಿಸಲಾಗಿದೆ ಎಂದರು.
ಇದನ್ನೂ ಓದಿ: ಬಾಲಕಿ ಮೇಲೆ ರೇಪ್, ಕೊಲೆ.. ಡಿಸಿ ನಕುಲ್ ಮಾನವೀಯ ಸ್ಪಂದನೆಗೆ ಒಪ್ಪಿ ಪ್ರತಿಭಟನೆ ವಾಪಸ್
'ಗುಳೆ ತಪ್ಪಿಸಲು ಉದ್ಯೋಗ ನೀಡಲಾಗುವುದು'
ಗುಳೆ ತಪ್ಪಿಸಲು ಜನರಿಗೆ ನರೇಗಾದಲ್ಲಿ ಕೆಲಸ ನೀಡಲಾಗುವುದು. ಸ್ಥಳೀಯವಾಗಿ ಉದ್ಯೋಗಾವಕಾಶ ಸೃಷ್ಟಿಸಲಾಗುವುದು. ಉದ್ಯೋಗಕ್ಕಾಗಿ ಯುವಕರಿಗೆ ತರಬೇತಿ ನೀಡಲಾಗುವುದು. ಇಲ್ಲಿನ ಕಾರ್ಖಾನೆಗಳಲ್ಲಿನ 12 ಸಾವಿರ ಜನ ಅಂತರ್‌ರಾಜ್ಯ ಕಾರ್ಮಿಕರು ಕೊರೊನಾ ಸಂದರ್ಭದಲ್ಲಿ ಸ್ವಂತ ಊರಿಗೆ ತೆರಳಿದ್ದಾರೆ. ಯುವಕರು ಮುಂದೆ ಬಂದು ತರಬೇತಿ ಪಡೆದು, ಉದ್ಯೋಗ ಪಡೆದುಕೊಳ್ಳಬಹುದಾಗಿದೆ. ಉಚಿತ ತರಬೇತಿಯನ್ನು ಯುವಕರು ಸದುಪಯೋಗ ಪಡೆದುಕೊಳ್ಳಬೇಕು. ಸಂಡೂರಿನಲ್ಲಿ ಲಂಬಾಣಿ ಕಲೆ ಬಗ್ಗೆ ಕರಕುಶಲ ಕೇಂದ್ರವಿದೆ. ಅಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.