ಹೊಸಪೇಟೆ: 2015ರ ಅವಧಿಯ ಜಾತಿವಾರು ಸಮೀಕ್ಷೆಯ ಅಂಕಿ-ಅಂಶಗಳನ್ನು ತ್ವರಿತಗತಿಯಲ್ಲಿ ಬಿಡುಗಡೆ ಮಾಡಲು ಆಗ್ರಹಿಸಿ ಹಿಂದುಳಿದ ವರ್ಗಗಳ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸುಪ್ರೀಂಕೋರ್ಟ್ ಹಾಗೂ 2005ರಲ್ಲಿ ಕೇಂದ್ರ ಸರ್ಕಾರದ ಸುತ್ತೋಲೆಯಂತೆ ದೇಶದ ರಾಜ್ಯಗಳಲ್ಲಿ ಪ್ರತಿ 10 ವರ್ಷಕ್ಕೊಮ್ಮೆ ಜಾತಿವಾರು ಸಾಮಾಜಿಕ ಆರ್ಥಿಕ ಸಮೀಕ್ಷೆ ನಡೆಸಬೇಕು. ಗಣತಿ ಅಂಕಿ-ಅಂಶಗಳ ಆಧಾರದ ಮೇಲೆ ವಿವಿಧ ಹಿಂದುಳಿದ ಜಾತಿಗಳಿಗೆ ಕಾಲಕ್ಕೆ ತಕ್ಕಂತೆ ಮೀಸಲಾತಿ ಪರಿಷ್ಕರಣೆ ಮಾಡಬೇಕು ಎಂದು ನ್ಯಾಯಾಲಯ ತೀರ್ಪಿನಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಆದರೆ, ಸರ್ಕಾರಗಳು ನ್ಯಾಯಾಲಯದ ತೀರ್ಪನ್ನು ಕಡೆಗಣಿಸಿವೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರ ಅಂಕಿ-ಅಂಶಗಳನ್ನು ಬಿಡುಗಡೆ ಮಾಡುವುದರಿಂದ ಹಿಂದುಳಿದವರಿಗೆ ಮಾತ್ರವಲ್ಲ ಇತರ ಜಾತಿಗಳ ಬಡವರಿಗೂ ಅನುಕೂಲವಾಗುತ್ತದೆ. ಸದ್ಯ ಜಾರಿಯಲ್ಲಿರುವ ಮೀಸಲಾತಿಯು ಈಗಿನ ಸ್ಥಿತಿಗತಿಗೆ ಅನುಗುಣವಾಗಿಲ್ಲ. ಹಿಂದುಳಿದ ವರ್ಗದವರು ರಾಜಕೀಯ, ಶೈಕ್ಷಣಿಕ, ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶಿರಸ್ತೇದಾರ ಶ್ರೀಧರ ಅವರಿಗೆ ಮನವಿ ಸಲ್ಲಿಸಿದರು.