ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ನಗರಸಭೆ ಹಾಗೂ ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಚುನಾವಣೆ ನಿಮಿತ್ತ ಇಂದು ಬೆಳಗ್ಗೆ 7 ರಿಂದಲೇ ಮತದಾನ ನಡೆಯುತ್ತಿದೆ.
ಸಿರುಗುಪ್ಪ ನಗರಸಭೆ - ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಿವಿಧ ವಾರ್ಡುಗಳಲ್ಲಿ ಮತದಾರರು ಸಾಲು, ಸಾಲಾಗಿ ಬಂದು ತಮ್ಮ ಹಕ್ಕನ್ನು ಚಲಾಯಿಸಿದ್ರು. ಆದರೆ ಸಿರುಗುಪ್ಪ ನಗರಸಭೆ ವ್ಯಾಪ್ತಿಯ 13 ಹಾಗೂ 14ನೇ ಮತಗಟ್ಟೆ ಸಂಖ್ಯೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದೇ ಮತದಾರರು ಮೊಬೈಲ್ ಬೆಳಕಿನಲ್ಲಿ ಮತ ಹಾಕಿದ್ರು. ಅಷ್ಟೇ ಅಲ್ಲ ಮತಗಟ್ಟೆಯಲ್ಲಿ ಸಿಬ್ಬಂದಿ ಕೂಡ ತಮ್ಮ ಕಾರ್ಯ ನಿರ್ವಹಿಸಲು ಪರದಾಟ ನಡೆಸಿದ್ರು. ಮತಗಟ್ಟೆ ಸಿಬ್ಬಂದಿಗೆ ಬರೆಯಲು ಟೇಬಲ್ಗಳನ್ನೇ ಹಾಕಿಲ್ಲದ ಕಾರಣ ಕುರ್ಚಿಗಳನ್ನೇ ಸಹಾಯವಾಗಿರಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವ ದೃಶ್ಯ ಕಂಡು ಬಂತು.
51 ಸ್ಥಾನಗಳಿಗೆ 134 ಅಭ್ಯರ್ಥಿಗಳು ಸ್ಪರ್ಧೆ:
ಉಭಯ ಸ್ಥಳೀಯ ಸಂಸ್ಥೆಯ ಅಂದಾಜು 51 ಸ್ಥಾನಗಳಿಗೆ ಸುಮಾರು 134 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಜಿಲ್ಲೆಯ ಸಿರುಗುಪ್ಪ ನಗರಸಭೆಯ 31 ಸ್ಥಾನಗಳಿಗೆ 119 ಮಂದಿ ಉಮೇದುದಾರರು ನಾಮಪತ್ರ ಸಲ್ಲಿಸಿದ್ದರು. ಬಳಿಕ 32 ಮಂದಿ ಉಮೇದುವಾರರು ನಾಮಪತ್ರ ವಾಪಸ್ ಪಡೆದಿದ್ದರಿಂದ ಒಟ್ಟಾರೆ 87 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ತೆಕ್ಕಲಕೋಟೆ ಪಟ್ಟಣ ಪಂಚಾಯಿತಿಯ 20 ಸ್ಥಾನಗಳ ಚುನಾವಣಾ ಕಣದಲ್ಲಿ ಅಂತಿಮವಾಗಿ 47 ಮಂದಿ ಉಮೇದುವಾರರು ಉಳಿದಿದ್ದಾರೆ. ಕಾಂಗ್ರೆಸ್ ನಿಂದ 20, ಬಿಜೆಪಿಯಿಂದ 17, ಜೆಡಿಎಸ್ ನಿಂದ 4, ಹಾಗೂ 6 ಪಕ್ಷೇತರರ ಮಧ್ಯೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ .
ಇನ್ನು ಪೊಲೀಸ್ ಠಾಣೆ, ತಾಲೂಕು ಕಚೇರಿ ಮುಂದೆ ಸ್ಪರ್ಧಿಗಳ ಕಡೆಯವರು ಪರವಾನಿಗೆ ಇಲ್ಲದೆ ಹಾಕಿದ್ದ ಪೆಂಡಾಲ್, ಕುರ್ಚಿ ಮೇಜು ಮತ್ತು ನೆಲಹಾಸುಗಳನ್ನು ಚುನಾವಣಾ ವೀಕ್ಷಕರು ತೆರವುಗೊಳಿದ್ದಾರೆ. ಈ ವೇಳೆ ಅಧಿಕಾರಿಗಳ ಜೊತೆ ಸ್ಪರ್ಧಿಗಳ ಬೆಂಬಲಿಗರು ವಾಗ್ವಾದ ಕೂಡ ನಡೆಸಿದ್ದಾರೆ.