ಬಳ್ಳಾರಿ: ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿಯಾಗಿರುವ ನೀರನ್ನು ನದಿಗೆ ಹರಿಬಿಡಲಾಗಿದೆ. ಈ ಹಿನ್ನೆಲೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕೆಂಚನಗುಡ್ಡ ಗ್ರಾಮದ ಬಳಿಯ ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಲ್ಪಟ್ಟ ವಿಜಯನಗರ ಆಣೆಕಟ್ಟೆಯು ಮಿನಿ ಜಲಪಾತದಂತೆ ಭಾಸವಾಗುತ್ತಿದೆ.
ವಿಜಯನಗರ ಆಣೆಕಟ್ಟೆಯಲ್ಲಿ ನೀರು ಧುಮ್ಮಿಕ್ಕಿ ಹರಿಯುತ್ತಿದ್ದು, ಜನರ ಮನ ಸೆಳೆಯುತ್ತಿದೆ. ಗಂಗಮ್ಮನ ಕಟ್ಟೆಯ ಹಿನ್ನೀರಿನಿಂದ ವಿಶಾಲವಾಗಿ ಹರಿಯುತ್ತಿರುವ ಈ ನೀರು ಕಟ್ಟೆಯ ಮೇಲ್ಭಾಗದಿಂದ ಝರಿಯಾಗಿ ಧುಮ್ಮಿಕ್ಕಿ ಹರಿಯುತ್ತಿರುವುದನ್ನು ನೋಡುವುದೇ ರೋಮಾಂಚನವೆನಿಸುತ್ತಿದೆ.
ಜನ ಆಣೆಕಟ್ಟೆಯಲ್ಲಿ ಕಟ್ಲ, ರೋಹಿ, ಹಾವು ಮೀನು ಸೇರಿದಂತೆ ವಿವಿಧ ಜಾತಿಯ ಮೀನುಗಳನ್ನು ಬಲೆ ಬೀಸಿ ಹಿಡಿದು ಸ್ಥಳದಲ್ಲಿಯೇ ಬೆಂಕಿಯಲ್ಲಿ ಸುಟ್ಟು ಮೀನಿನ ರುಚಿ ಸವಿಯುತ್ತಿದ್ದಾರೆ.