ಬಳ್ಳಾರಿ: ಸಿದ್ದರಾಮಯ್ಯ ಹಾಕಿದ್ದ ಸವಾಲು ಸ್ವೀಕರಿಸಿದ್ದೇನೆ. ಉಗ್ರಪ್ಪನನ್ನು ಕಳಿಸುವ ಬದಲು ಅವರೇ ಬರಲಿ. ಅವರ ಆಡಳಿತ ಸಂದರ್ಭದಲ್ಲಿ ಇಲ್ಲಿಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಿತ್ತಾ ಅಥವಾ ನಮ್ಮ ಸರ್ಕಾರ ಸಮಯದಲ್ಲಾ ಎಂಬುದನ್ನು ನೋಡೋಣ. ಸವಾಲು ಹಾಕಿದ ಅವರೇ ಬರಲಿ ಬಾಲ ಬರುವುದು ಬೇಡ ಎಂದು ಏಕ ವಚನದಲ್ಲಿ ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ವಾಗ್ದಾಳಿ ನಡೆಸಿದರು.
ಬಳ್ಳಾರಿ ಜಿಲ್ಲಾ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಶ್ರೀರಾಮುಲು ಮಾತನಾಡಿದರು. ಈ ಚುನಾವಣೆ ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದನ್ನು ಪತ್ರಿಕೆಯಲ್ಲಿ ಓದಿದೆ. ಹೌದು ಅವರ ಪಾಪದ ಕೊಡ ತುಂಬಿದೆ, ಹೀಗಾಗಿ ಈ ಚುನಾವಣೆ ಕೊನೆ ಚುನಾವಣೆ ಆಗಲಿದೆ. ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿ ಶಕುನಿ ಇದ್ದಂತೆ. ಅವರ ರಾಜಕೀಯ ಇತಿಹಾಸ ನೋಡಿದರೆ ತಿಳಿಯುತ್ತದೆ. ಜೆಡಿಎಸ್ನಲ್ಲಿ ಬೆಂಕಿ ಹಚ್ಚಿ ಹೊರಗೆ ಬಂದರು, ಕಾಂಗ್ರೆಸ್ನಲ್ಲಿ ಬೆಂಕಿ ಹಚ್ಚಿದರು. ದೇವೇಗೌಡರ ಬೆನ್ನಿಗೆ ಚೂರಿ ಹಾಕಿದರು. ಡಿ.ಕೆ.ಶಿವಕುಮಾರ್ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಪ.ಜಾ ಮತ್ತು ಪ.ಪಂಗೆ ಮೀಸಲಾತಿ ವಿಚಾರದಲ್ಲಿ ನಿಮ್ಮ ಆಡಳಿತ ಇದ್ದಾಗ ಬಂದ ಫೈಲ್ನ್ನು ಮೂಲೆ ಹಾಕಿದ್ದರು. ಹೇಳುವುದು ಮಾತ್ರ ಹಿಂದುಳಿದವರ ನಾಯಕ ಎಂದು ಅವರಿಗೆ ಮೀಸಲಾತಿ ಕೊಡಲು ನಮ್ಮ ಸರ್ಕಾರವೇ ಬೇಕಾಯಿತು. ಈಗ ಅವರಿಗೆ ಮೀಸಲಾತಿ ಬಗ್ಗೆ ಮಾತನಾಡುವ ನೈತಿಕತೆಯನ್ನೇ ಕಳೆದುಕೊಂಡಿದ್ದಾರೆ. ಈಗ ನಮ್ಮ ಸರ್ಕಾರ ಮೀಸಲಾತಿ ನೀಡಿದೆ ಎಂದರು.
ರಾಮುಲು ಏನು ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದ್ದೀರಿ. ನಾನು ಈ ಬಹಿರಂಗ ಸವಾಲಿಗೆ ಒಪ್ಪಿಕೊಂಡಿದ್ದೇನೆ. ಎಲ್ಲಿ ಭಾರತ್ ಜೋಡೋ ಸಮಾವೇಶ ಮಾಡಿದ್ದೀರಿ ಅಲ್ಲೇ ನಮ್ಮ ಸರ್ಕಾರ ಮತ್ತು ನಿಮ್ಮ ಸರ್ಕಾರ ಅನುದಾನ ಲೆಕ್ಕ ಮಾಡೋಣ. ನಿಮ್ಮ ಬದಲು ಉಗ್ರಪ್ಪ ಅವರನ್ನು ಕಳಿಸಬೇಡಿ. ನೀವು ಬಜೆಟ್ ಮಂಡಿಸಿದ ಅನುಭವ ಇರುವ ನೀವೇ ಬನ್ನಿ, ಪ್ರತಿಯೊಂದನ್ನು ಲೆಕ್ಕ ಮಾಡುವ ಎಂದು ಏಕವಚನದಲ್ಲೇ ಉತ್ತರಿಸಿದರು.
ಇದನ್ನೂ ಓದಿ : ಬಳ್ಳಾರಿಯಲ್ಲಿ ಭಾರತ್ ಜೋಡೋ ಐತಿಹಾಸಿಕ ಸಮಾವೇಶ : ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ