ಬಳ್ಳಾರಿ: ಜಿಂದಾಲ್ ಸಮೂಹ ಸಂಸ್ಥೆಗೆ ಅಂದಾಜು 3,667 ಎಕರೆ ಭೂಮಿಯನ್ನು ಪರಾಭಾರೆ ಮಾಡೋ ವಿಚಾರ ಕೈ ಬಿಡಬೇಕು. ವಿಜಯನಗರ ಕ್ಷೇತ್ರವನ್ನು ಜಿಲ್ಲೆಯನ್ನಾಗಿ ಘೋಷಿಸಬೇಕೆಂಬುದು ನನ್ನ ಪ್ರಮುಖ ಬೇಡಿಕೆಯಾಗಿದ್ದು, ನನ್ನ ಇವೆರಡೂ ಬೇಡಿಕೆ ಈಡೇರಬೇಕು ಎಂದು ವಿಜಯನಗರ ಕ್ಷೇತ್ರದ ಶಾಸಕ ಬಿ.ಎಸ್.ಆನಂದ್ ಸಿಂಗ್ ಪಟ್ಟು ಹಿಡಿದಿದ್ದಾರೆ.
ಜಿಲ್ಲೆಯ ಹೊಸಪೇಟೆ ನಗರದ ತಮ್ಮ ನಿವಾಸದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ್ ಸಿಂಗ್, ಈಗಾಗಲೇ ನನ್ನ ಬೇಡಿಕೆಯನ್ನು ಕಾಂಗ್ರೆಸ್ ಸಿಎಲ್ಪಿ ನಾಯಕ ಸಿದ್ದರಾಮಯ್ಯ ಹಾಗೂ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತಂದಿರುವೆ. ಮೊನ್ನೆ ತಾನೇ ಅಮೆರಿಕದಿಂದ ಸಿಎಂ ಕುಮಾರಸ್ವಾಮಿಯವರು ನನಗೆ ಕರೆ ಮಾಡಿ ಮಾತನಾಡಿದ್ದಾರೆ. ನಿಮ್ಮ ಬೇಡಿಕೆಯನ್ನು ನಾನು ಭಾರತಕ್ಕೆ ಬಂದ ನಂತರ ಪರಿಶೀಲಿಸುವುದಾಗಿ ಹೇಳಿದ್ದಾರೆ ಎಂದರು.
ಈ ಸರ್ಕಾರಕ್ಕೆ ಎರಡು ಬೇಡಿಕೆ ಇಟ್ಟಿದ್ದೇನೆ. ಜಿಂದಾಲ್ ಸಂಸ್ಥೆ ಸೇರಿದಂತೆ ಯಾವುದೇ ಕಾರ್ಖಾನೆಗಳಿಗೆ ಭೂಮಿ ಮಾರಾಟ ಮಾಡಬಾರದು. ಉದ್ಯೋಗ ಸೃಷ್ಟಿ ಮಾಡೋ ನೆಪದಲ್ಲಿ ಭೂಮಿ ಕಡಿಮೆ ಬೆಲೆಗೆ ಕೊಡೋದು ಸೂಕ್ತವಲ್ಲ. ಲೀಜ್ ಮಾತ್ರ ಕೊಡಿ. ವಿಜಯನಗರ ಜಿಲ್ಲೆ ಆಗಬೇಕೆಂದು ಮನವಿ ಮಾಡಿದ್ದೇನೆ. ರಾಜ್ಯ ಸರ್ಕಾರ ಯಾವ ಆದೇಶ ಹೊರಡಿಸುತ್ತದೆ ಎಂದು ಕಾದು ನೋಡುವೆ. ನನ್ನ ಬೇಡಿಕೆ ಈಡೇರಿಸುವವರೆಗೆ ನನ್ನ ತಿರ್ಮಾನ ವಾಪಸ್ ತಗೋಳಲ್ಲ. ಮತ್ತೊಮ್ಮೆ ರಾಜೀನಾಮೆ ಅಂಗೀಕರಿಸಬೇಕೆಂದು ಮನವಿ ಮಾಡುತ್ತೇನೆ. ಶಾಸಕರ ರಾಜೀನಾಮೆ ವಿಚಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ.
ಎಸ್.ಟಿ.ಸೋಮಶೇಖರ್ ಹೇಳಿಕೆಗೆ ನಾನು ಉತ್ತರಿಸಲ್ಲ. ನನ್ನ ಕ್ಷೇತ್ರದಲ್ಲಿ ಇದ್ದೇನೆ. ನನ್ನ ಎರಡು ಬೇಡಿಕೆ ಈಡೇರಿಸೋವರೆಗೂ ನನ್ನ ನಿಲುವು ಬದಲಾಗುವುದಿಲ್ಲ ಎಂದರು. ರಾಜೀನಾಮೆ ಅಂಗೀಕಾರ ಮಾಡದಿದ್ದರೆ ಈಗ ಹದಿನಾಲ್ಕು ಶಾಸಕರು ಕಾದು ನೋಡಿ ಅಂತಾರಲ್ಲ, ಅವರಂತೆ ನಾನೂ ಕೂಡ ಕಾದು ನೋಡಿ ಎನ್ನುವೆ ಎಂದರು.