ಬಳ್ಳಾರಿ: ಮಹಾಮಾರಿ ಕೊರೊನಾ ಸೋಂಕನ್ನು ವೈಜ್ಞಾನಿಕ ತಂತ್ರಜ್ಞಾನದಿಂದ ಅಳಿಸಲು ಅಸಾಧ್ಯ. ಅದರ ಬದಲಿಗೆ ಹಿಂದೂ ಧರ್ಮದ ಸಂಪ್ರದಾಯ ಪಾಲನೆಯಿಂದಲೇ ಈ ಸೋಂಕು ತೊಲಗಿಸಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.
ಜಿಲ್ಲೆಯ ಹೊಸಪೇಟೆ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕೃತಿ ವಿರುದ್ಧ ಮನುಜ ಕುಲ ಹೋದಾಗ ಇಂತಹ ಗಂಭೀರ ಸ್ವರೂಪದ ಸಮಸ್ಯೆಯನ್ನ ಎದುರಿಸಬೇಕಾಗುತ್ತೆ. ಅಂತಹ ಸಮಸ್ಯೆಯಲ್ಲಿ ನಾವೆಲ್ಲ ಸಿಲುಕಿಕೊಂಡಿದ್ದೇವೆ. ನಾವೆಲ್ಲ ಪಕ್ಷಾತೀತವಾಗಿ, ಜಾತ್ಯತೀತವಾಗಿ ಈ ಮಹಾಮಾರಿ ಕೊರೊನಾ ಸೋಂಕಿನ ವಿರುದ್ಧ ಹೋರಾಡಬೇಕಾಗಿದೆ ಎಂದ್ರು.
ಸದ್ಯ ಟೀಕೆ - ಟಿಪ್ಪಣೆ ಮಾಡುವುದನ್ನ ಬಿಡಬೇಕು. ಸೂಕ್ತ ಸಲಹೆ ಸೂಚನೆಯನ್ನ ನೀಡಬೇಕು. ಪ್ರತಿಯೊಬ್ಬರು ಯೋಧರ ರೀತಿಯಾಗಿ ಈ ಕೊರೊನಾ ವಿರುದ್ಧ ಹೋರಾಡಬೇಕು ಎಂದರು.
ಈ ದೇಶ ಸದ್ಯ ಸುರಕ್ಷಿತ ನಾಯಕನ ಕೈಯಲ್ಲಿದ್ದು, 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಘೋಷಣೆ ಮಾಡಿದ್ದು, ನಮಗೆಲ್ಲ ಅನುಕೂಲಕರ ಆಗಿದೆ. ದೇಶ ಆರ್ಥಿಕ ಸಂಕಷ್ಟ ಎದುರಿಸಿದರೂ ಮನುಜಕುಲದ ರಕ್ಷಣೆಗೆ ಪ್ರಧಾನಿ ಮೋದಿಯವರು ನಿಂತಿರೋದು ನಿಜಕ್ಕೂ ಶ್ಲಾಘನಾರ್ಹ ಎಂದರು.
ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪ, ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಚನ್ನಬಸವನ ಗೌಡ ಪಾಟೀಲ, ಬಿಜೆಪಿಯ ಮಂಡಲ ಅಧ್ಯಕ್ಷ ಬಸವರಾಜ ನಲತ್ವಾಡ್ ಉಪಸ್ಥಿತರಿದ್ದರು.