ಬೆಳಗಾವಿ: ಅನರ್ಹ ಶಾಸಕರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಬೆಳಗಾವಿಯಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.
ಸುಪ್ರೀಂಕೋರ್ಟ್ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸವದಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಅನರ್ಹರ ಬಗ್ಗೆ ನಾವೇಕೆ ಚಿಂತೆ ಮಾಡಬೇಕು. ಅವರ ಬಗ್ಗೆ ನಾವು ಚಿಂತನೆ ಮಾಡುವ ಅವಶ್ಯಕತೆ ನಮಗಿಲ್ಲ ಎಂದಿದ್ದಾರೆ.
ಅನರ್ಹರು ನಮ್ಮ ಪಕ್ಷಕ್ಕೆ ಬರುವ ಕುರಿತು ಎಲ್ಲೂ ಹೇಳಿಲ್ಲ. ಸ್ಪೀಕರ್ ಅನರ್ಹಗೊಳಿಸಿದ್ದಕ್ಕೆ ಅವರು ಸುಪ್ರೀಂಕೋರ್ಟ್ಗೆ ಹೋಗಿದ್ದಾರೆ. ಅವರಿಗೆ ನ್ಯಾಯಬೇಕೆಂದು, ಕಾಂಗ್ರೆಸ್ನವರು ತಮಗೆ ನ್ಯಾಯಬೇಕೆಂದು ಕೋರ್ಟ್ಗೆ ಹೋಗಿದ್ದಾರೆ. ಇದು ಅವರ ಮಧ್ಯದ ವ್ಯಾಜ್ಯ. ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಇದಕ್ಕೆ ನಾವ್ಯಾಕೆ ಉತ್ತರಿಸಬೇಕು.ಈ ಕ್ಷಣದವರೆಗೂ ಅನರ್ಹರಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.