ಬೆಳಗಾವಿ: ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿ ದ್ವಿಚಕ್ರ ವಾಹನಗಳ ಬಿಡಿ ಭಾಗಗಳ ಮಾರಾಟ ಮಾಡುತ್ತಿದ್ದ ಅಂಗಡಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಅಂದಾಜು 40 ಲಕ್ಷ ರೂ.ಗೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಹೋಗಿರುವ ಘಟನೆ ನಗರದ ಮಾದ್ವಾ ರಸ್ತೆಯಲ್ಲಿ ನಡೆದಿದೆ.
ನಗರದ ಮಹಾದ್ವಾರ ರೋಡ್‌ನಲ್ಲಿರುವ ಸನತ್ ಜಗವಾಲೆ ಎಂಬುವವರಿಗೆ ಸೇರಿದ ಜೇಮಿನಿ ಡಿಸ್ಟ್ರಿಬ್ಯೂಟರ್ಸ್ ಹೆಸರಿನ ಅಂಗಡಿಯಲ್ಲಿ ಅನಾಹುತ ನಡೆದಿದೆ. ಮಾಲೀಕರು ಹಾಗೂ ಕೆಲಸಗಾರರು ದೀಪಾವಳಿ ಪೂಜೆ ಮುಗಿಸಿ ಮನೆಗೆ ಹೋಗುತ್ತಿದ್ದಂತೆ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಶಾರ್ಟ್ ಸರ್ಕ್ಯೂಟ್‌ನಿಂದ ಅವಘಡ ಉಂಟಾಗಿದೆ ಎಂದು ತಿಳಿದುಬಂದಿದೆ.
ನೋಡನೋಡುತ್ತಿದ್ದಂತೆ ಇಡೀ ಅಂಗಡಿಗೆ ಬೆಂಕಿ ಆವರಿಸಿ ಅಂಗಡಿಯಲ್ಲಿ ಬೈಕ್‌ಗಳ ಬಿಡಿ ಭಾಗಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಅಷ್ಟೊತ್ತಿಗಾಗಲೇ ಬಹುತೇಕ ವಸ್ತುಗಳು ಸುಟ್ಟು ಹೋಗಿದ್ದವು.
ಅಂಗಡಿ ಮಾಲೀಕ ಶೈಲಶ್ರೀ ಸನತ್ ಜಗವಾಲೆ ಪ್ರತಿಕ್ರಿಯಿಸಿ, ನಮ್ಮ ಜೆಮಿನಿ ಡಿಸ್ಟ್ರಿಬ್ಯೂಟರ್ಸ್ ದ್ವಿಚಕ್ರ ವಾಹನದ ಬಿಡಿ ಭಾಗಗಳ ಅಂಗಡಿಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿದೆ. ಇದರಿಂದ ಸುಮಾರು 35ರಿಂದ 40ಲಕ್ಷ ರೂಪಾಯಿ ಹಾನಿ ಆಗಿದೆ. ಏನೊಂದೂ ಉಳಿದಿಲ್ಲ. ಉಳಿದರೂ ಅದು ಯಾವುದಕ್ಕೂ ಉಪಯೋಗಕ್ಕೆ ಬರೋದಿಲ್ಲ. ಪೂಜೆ ಮಾಡಿ, ದೀಪ ಆರುವವರೆಗೂ ಇಲ್ಲಿಯೇ ಇದ್ದು ಆಮೇಲೆ ಅಂಗಡಿಗೆ ಕೀಲಿ ಹಾಕಿ ನಾವು ಮನೆಗೆ ಹೋಗಿದ್ದೆವು. ಅದಾದ ಬಳಿಕ ಈ ರೀತಿ ಅವಘಡ ಆಗಿದೆ ಎಂದರು. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಗ್ರಾ ಪಂ ಅಧ್ಯಕ್ಷನ ಮನೆಗೆ ನುಗ್ಗಿದ ಕಳ್ಳರು.. ಕುಟುಂಬವನ್ನು ಕೂಡಿಹಾಕಿ 23ಲಕ್ಷ ವಿಮೆ ಹಣ, 120ಗ್ರಾಂ ಚಿನ್ನ ದರೋಡೆ