ಬೆಳಗಾವಿ: ಮಹಾರಾಷ್ಟ್ರದಲ್ಲಿ ಮೂರು ಸರ್ಕಾರಗಳು ಕೂಡಿ ಮೂರಾಬಟ್ಟಿ ಸರ್ಕಾರ ರಚನೆ ಮಾಡಿವೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳು ಸೇರಿ ಸರ್ಕಾರ ಮಾಡಿವೆ. ಇಲ್ಲಿ ಕಾಂಗ್ರೆಸ್ ಮತ್ತು ಶಿವಸೇನೆಗೆ ಎಂದೂ ಹೊಂದಾಣಿಕೆ ಆಗಲು ಸಾಧ್ಯವಿಲ್ಲ. ಎಣ್ಣೆ-ಸೀಗೆಕಾಯಿ ಹಾಗೆ ಆಗಿದೆ ಎಂದರು.
ಶಿವಸೇನೆ ಹಿಂದುತ್ವದ ಆಧಾರದ ಮೇಲೆ ಹುಟ್ಟಿದ್ದು. ಆದರೆ, ಅಧಿಕಾರದ ಆಸೆಗಾಗಿ ಉದ್ಧವ್ ಠಾಕ್ರೆ ತತ್ವ ಸಿದ್ಧಾಂತಗಳು ಇಲ್ಲದ ಪಕ್ಷದ ಜತೆಗೆ ಕೈಜೋಡಿಸಿ ಸರ್ಕಾರ ಮಾಡಿದ್ದಾರೆ. ಇದು ಮಹಾ ಅಪರಾಧವಾಗಿದ್ದು, ಹಿಂದುತ್ವದ ಆಧಾರದ ಮೇಲೆ ಶಿವಸೇನೆಯಲ್ಲಿ ಗೆದ್ದು ಬಂದ ಶಾಸಕರು ಇದೀಗ ಉದ್ಧವ್ ಠಾಕ್ರೆ ಸರ್ಕಾರದ ವಿರುದ್ಧ ಬಂಡೆದಿದ್ದಾರೆ. ಇದೇ ವೇಳೆ ಫಡ್ನವಿಸ್ ಸರ್ಕಾರ ಯಾವಾಗ ರಚನೆ ಆಗುತ್ತದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಕಾದುನೋಡಿ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ತತ್ವ ಸಿದ್ಧಾಂತವೇ ಇಲ್ಲ, ಅಂತವರ ಜತೆಯಲ್ಲಿ ಶಿವಸೇನೆಯ ಶಾಸಕರೇ ಬಂಡೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆಡಳಿತ ಮೆಚ್ಚಿ ಬಿಜೆಪಿ ಬಲಾಢ್ಯ ಪಕ್ಷವಾಗ್ತಿದೆ. ಅಂದು ಮಹಾರಾಷ್ಟ್ರದಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿರಲಿಲ್ಲ. ಆದರೆ ಜನಬೆಂಬಲ ಇರುವ ಪಕ್ಷ ಅಧಿಕಾರಕ್ಕೆ ಬರಬೇಕಿತ್ತು. ಆದರೆ ಅಧಿಕಾರದ ಆಸೆಗೆ ಈ ಸರ್ಕಾರ ರಚನೆ ಮಾಡಿರುವುದು. ಇದೀಗ ಅವರಾಗಿಯೇ ತಮ್ಮ ಪಕ್ಷದ ವಿರುದ್ಧ ಬಂಡೆದಿದ್ದು ಬಿಜೆಪಿ ಪಕ್ಷದ ತತ್ವ ಸಿದ್ಧಾಂತ ಒಪ್ಪಿಕೊಂಡು ಬಂದರೆ ಸ್ವಾಗತಿಸುತ್ತೇವೆ ಎಂದು ಕಾರಜೋಳ ಹೇಳಿದರು.
ಭ್ರೂಣಗಳು ಪತ್ತೆ, ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ತನಿಖೆ: ಮೂಡಲಗಿ ಪಟ್ಟಣದಲ್ಲಿ ಏಳು ಭ್ರೂಣಗಳು ಪತ್ತೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಮೂಡಲಗಿ ಪಟ್ಟಣದಲ್ಲಿ ಏಳು ಭ್ರೂಣಗಳ ಪತ್ತೆ ಬಗ್ಗೆ ತಜ್ಞ ವೈದ್ಯರಿಂದ ಪರೀಕ್ಷೆ ಮಾಡಿಸಿ ಎಂದು ಈಗಾಗಲೇ ಡಿಎಚ್‌ಒ ಅವರಿಗೆ ಸೂಚನೆ ಕೊಟ್ಟಿದ್ದೇನೆ. ಪ್ರಕರಣದಲ್ಲಿ ವೈದ್ಯಾಧಿಕಾರಿಗಳಾಗಲಿ ಯಾರೇ ಆಗಲಿ, ತಪ್ಪು ಮಾಡಿದ್ರೇ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಪ್ರಾದೇಶಿಕ ಆಯುಕ್ತರ ಮೂಲಕ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ. ವರದಿ ಬಂದ ಬಳಿಕ ಖಂಡಿತವಾಗಿ ಕ್ರಮ ಕೈಗೊಳ್ಳುತ್ತೇವೆ. ನಿಖರವಾದ ಮಾಹಿತಿ ಇಲ್ಲದೆ ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಹೇಳಿದರು.
ರಾಮದುರ್ಗ ತಹಶೀಲ್ದಾರ್ ಆಡಿಯೋ ವೈರಲ್ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಕಾರಜೋಳ, ಅಕ್ರಮ ಮರಳುಗಾರಿಕೆಯಲ್ಲಿ ಯಾರೇ ತೊಡಗಿದ್ದರೂ ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ತನಿಖೆ ನಡೆಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ. ಸಮಗ್ರ ತನಿಖಾ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಳಗಾವಿಯಲ್ಲಿ ಎಂಇಎಸ್ ಪ್ರತಿಭಟನೆ ವಿಚಾರ ಕುರಿತು ಮಾತನಾಡಿದ ಅವರು, ವಿಕೃತ ಮನಸ್ಸಿನವರು ಸಮಾಜದಲ್ಲಿ ಅಶಾಂತಿ ಉಂಟುಮಾಡಲು ಈ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದೆ. ಮರಾಠಿಯಲ್ಲಿ ದಾಖಲೆ ನೀಡಲು ಆಗ್ರಹಿಸಿ ಎಂಇಎಸ್ ನಡೆಸುತ್ತಿರುವ ಪ್ರತಿಭಟನೆಗೆ ಅರ್ಥ ಇಲ್ಲ. ಅವರೇನು ಪಾಕಿಸ್ತಾನದವರು ಅಲ್ಲ. ಅವರು ನಮ್ಮವರೇ ಇದ್ದಾರೆ. ದುರಾಭಿಮಾನ ಬಿಟ್ಟು ನಮ್ಮ ಜತೆಗೆ ಬನ್ನಿ ಎಂದು ಮನವೊಲಿಸುವ ಪ್ರಯತ್ನ ಮಾಡುತ್ತೇವೆ. ಕನ್ನಡದಲ್ಲಿ ಆಡಳಿತ ನಡೆಸುವುದಕ್ಕೆ ಸಹಕರಿಸಿ ಎಂದು ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಓದಿ :ಬೀದರ್ನಲ್ಲಿ ವರುಣಾರ್ಭಟ.. ದಾಖಲೆ ಮಳೆಗೆ ದಾಬಕಾ ಗ್ರಾಮದ ಜನ ಹೈರಾಣ