ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಕಾರಣ ನಮ್ಮ ಸಮುದಾಯದವರೇ ಕೆಲವರು ಮಾನಸಿಕವಾಗಿ ನೋವು ಕೊಡ್ತಿದ್ದಾರೆ. ಅಕ್ಟೋಬರ್ 1 ರ ಒಳಗಾಗಿ ಮನಃ ಪರಿವರ್ತನೆ ಆಗುತ್ತಾರೆ ಎಂಬ ನಂಬಿಕೆ ಇದೆ. ಹೋರಾಟ ಹತ್ತಿಕ್ಕಿದ್ರೆ ಅವರ ಹೆಸರನ್ನು ಅಕ್ಟೋಬರ್ 1 ರಂದೇ ಬಹಿರಂಗ ಪಡಿಸುವುದಾಗಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ನನ್ನನ್ನು ಮಠದ ಪೀಠಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಷಡ್ಯಂತ್ರ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ನಾನು ಜನರಿಂದ ಗುರು ಆಗಿದ್ದವನು, ಜನರ ಪರವಾಗಿದ್ದವನು. ಸ್ವಾಮೀಜಿಗಳ ಏಳಿಗೆ ಸಹಿಸದೇ ಅವಕಾಶವಾದಿ ಮನಸ್ಸುಗಳು ಪಿತೂರಿ ಮಾಡ್ತಾನೆ ಇರ್ತಾರೆ. ಮಾನಸಿಕವಾಗಿ ನನಗೆ ನೋವು ಕೊಡ್ತಾಯಿದ್ದಾರೆ. ಈ ಹೋರಾಟ ಮಾಡಬೇಡಿ ನಿಲ್ಲಸಿ ಅಂತಿದ್ದಾರೆ. ಹಿಂದೆ ಪಾದಯಾತ್ರೆ ಬೆಂಗಳೂರು ಮುಟ್ಟುವವರೆಗೂ ನನಗೆ ತೊಂದರೆ ಕೊಟ್ಟರು. ರಾಜಕೀಯ ನಾಯಕರ ಒಳಸಂಚಿನಿಂದ ನಮ್ಮ ಸಮಾಜದ ವ್ಯಕ್ತಿಗಳಿಂದ ಕಿರುಕುಳ ಆಗ್ತಿದೆ ಎಂದು ಹೇಳಿದ್ದಾರೆ.
'ಜೀವ ಬೇದರಿಕೆ ಇಲ್ಲ ಮಾನಸಿಕವಾಗಿ ತೊಂದರೆ ನೀಡುತ್ತಿದ್ದಾರೆ':
ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದೇನೆ. ಭೌತಿಕ ಕಟ್ಟಡ ಕಟ್ಟುವ ಕೆಲಸ ಮಾಡಿಲ್ಲ. ಜೀವ ಬೇದರಿಕೆ ಇಲ್ಲ ಮಾನಸಿಕವಾಗಿ ತೊಂದರೆ ಕೊಡುತ್ತಿದ್ದಾರೆ. ಚಳವಳಿ ಶುರುವಾದಾಗಲೇ ಚಳವಳಿ ನಿಲ್ಲಸಬೇಕೆಂದು ಬಹಳ ದೊಡ್ಡ ಷಡ್ಯಂತ್ರ ಮಾಡುತ್ತಿದ್ದಾರೆ. ನಾನು ಅವರ ಮಾತು ಕೇಳಲಿಲ್ಲ. ಹೇಗಾದರೂ ಮಾಡಿ ಪಾದಯಾತ್ರೆ ನಿಲ್ಲಿಸಬೇಕು ಅಂತ ತುಮಕೂರಿನವರೆಗೂ ಪ್ರಯತ್ನ ಮಾಡಿದರು. ಆದರೆ ಪಾದಯಾತ್ರೆ ಬೆಂಗಳೂರು ಮುಟ್ಟುತ್ತಿದ್ದಂತೆ ಅವರ ಮುಖವಾಡ ಕಳಚಿತು. ಅವರ ಬಣ್ಣ ಬಯಲಾಗಿ ಇಡೀ ಸಮಾಜಕ್ಕೆ ಅವರು ವಿಲನ್ ಆಗಿ ಕಾಣಿಸಿದರು ಎಂದು ಹೇಳಿದ್ದಾರೆ.
'ಹಣದ ಆಸೆ ತೋರಿಸಿ ವ್ಯವಸ್ಥಿತವಾದ ಷಡ್ಯಂತ್ರ':
ಒಬ್ಬ ವ್ಯಕ್ತಿ ಅಧಿಕಾರ ಮತ್ತು ಹಣದ ಆಸೆ ತೋರಿಸಿ ವ್ಯವಸ್ಥಿತವಾದ ಷಡ್ಯಂತ್ರ ಮಾಡುತ್ತಿದ್ದಾರೆ. ಅವರು ಯಾರು ಅಂತಾ ಅಕ್ಟೋಬರ್ 1 ರಂದು ಬಾಯಿ ಬಿಡುತ್ತೇನೆ. ನನ್ನನ್ನ ಕೆಳಗಿಳಿಸಲು ಯಾರ ಕೈಯಿಂದಲೂ ಸಾಧ್ಯವಿಲ್ಲ. ಷಡ್ಯಂತ್ರ ನಡೆಸುತ್ತಿರುವ ವ್ಯಕ್ತಿ ನನ್ನ ಕುಲದವನೇ, ನನ್ನ ಸಮಾಜದವರೇ ಆಗಿದ್ದಾರೆ. ಜನಪರವಾಗಿರುವ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಬಾರದು. ನನಗೆ ಕಿರುಕುಳ ಕೊಡ್ತಿರುವ ವಿಚಾರ ಯಾರ ಬಳಿಯೂ ಪ್ರಸ್ತಾಪ ಮಾಡಿಲ್ಲ. ಆ ನೋವನ್ನ ನಾನೇ ನುಂಗಿ ವಿಷಕಂಠ ಆಗಿದ್ದೇನೆ. ನಾನು ಅವರ ಹಣದ ಡಿಮ್ಯಾಂಡ್‌ಗೆ ಮರುಳಾಗಿಲ್ಲ. ಹೊಸ ಕಾರು ಕೊಡ್ತೇನಿ ಹೋರಾಟ ನಿಲ್ಲಿಸಿ ಅಂದ್ರೂ, ನಾನು ಬೇಡಾ ಅಂದೆ. ದುಡ್ಡಿನ ಆಮಿಷಕ್ಕೆ ಒಳಗಾಗೋದಿದ್ರೇ ನನ್ನ ಹೋರಾಟ ಕುಷ್ಟಗಿ ದಾಟುತ್ತಿರಲಿಲ್ಲ ಎಂದಿದ್ದಾರೆ.
'ಮೂವತ್ತು ಜನರನ್ನು ಮಂತ್ರಿ ಮಾಡಿದ್ರೂ ನನ್ನ ಹೋರಾಟ ನಿಲ್ಲಿಸಲ್ಲ ಅಂದಿದ್ದೆ':
ನಾನು ಸುವರ್ಣಸೌಧದ ಮುಂದೆ ಉಪವಾಸ ಸತ್ಯಾಗ್ರಹ ಕುಳಿತಿದ್ದೆ. ನನ್ನ ಮಿನಿಸ್ಟರ್ ಮಾಡದಿದ್ದಕ್ಕೆ ಸ್ವಾಮೀಜಿ ಉಪವಾಸ ಸತ್ಯಾಗ್ರಹ ಕುಳಿತಿದ್ದಾರೆ ಅಂತ ಹೈಕಮಾಂಡ್ ಮುಂದೆ ಹೇಳಿ ಮಂತ್ರಿಸ್ಥಾನ ಪಡೆದಿದ್ದಾರೆ. ನಾನು ಪಾದಯಾತ್ರೆ ಆರಂಭಿಸಿದ ಬಳಿಕ ಸಿಎಂ ಆಗಿದ್ದ ಬಿಎಸ್‌ವೈ ಕರೆ ಮಾಡಿ ಪಾದಯಾತ್ರೆ ನಿಲ್ಲಿಸಿ ಅವರನ್ನ ಮಂತ್ರಿ ಮಾಡ್ತೀನಿ ಅಂದ್ರು. ಮೂವತ್ತು ಜನರನ್ನು ಮಂತ್ರಿ ಮಾಡಿದ್ರೂ ನನ್ನ ಹೋರಾಟ ನಿಲ್ಲಿಸಲ್ಲ ಅಂತ ಹೇಳಿದ್ದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅನುಕೂಲ ಸಿಂಧು ರಾಜಕಾರಣ ನಮ್ಮನ್ನು ತಲೆತಗ್ಗಿಸುವಂತೆ ಮಾಡುತ್ತಿವೆ : ಸಭಾಪತಿ ಬಸವರಾಜ ಹೊರಟ್ಟಿ