ಬೆಳಗಾವಿ/ಹುಬ್ಬಳ್ಳಿ : ದೇಶದ ವಿವಿಧೆಡೆ ಪಿಎಫ್ಐ ಮುಖಂಡರ ಮನೆ ಮೇಲೆ ಎನ್ಐಎ ದಾಳಿ ನಡೆಸಿದ ಹಿನ್ನೆಲೆ ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಪಿಎಫ್ಐ, ಎಸ್ಡಿಪಿಐ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದ ಪಿಎಫ್ಐ ಕಾರ್ಯಕರ್ತರು ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಈ ವೇಳೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದರು. ಆರ್‌ಎಸ್ಎಸ್ ಮುರ್ದಾಬಾದ್, ಪಿಎಫ್ಐ ಜಿಂದಾಬಾದ್ ಎಂದು ಘೋಷಣೆ ಕೂಗಿದರು. ಇನ್ನು ರಾಷ್ಟ್ರೀಯ ಹೆದ್ದಾರಿ 4ರ ಪುಣೆ - ಬೆಂಗಳೂರು ರಸ್ತೆ ಸಂಚಾರ ಸುಮಾರು 15 ನಿಮಿಷಗಳ ಕಾಲ ರಸ್ತೆ ಸ್ಥಗಿತಗೊಂಡಿತ್ತು.
10ಕ್ಕೂ ಹೆಚ್ಚು ಪಿಎಫ್ಐ ಕಾರ್ಯಕರ್ತರು ವಶಕ್ಕೆ : ಪಿಎಫ್ಐ ಬೆಳಗಾವಿ ಜಿಲ್ಲಾಧ್ಯಕ್ಷ ನವೀದ್ ಕಟಗಿ ಸಹಿತ 10ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದು ಕಾಕತಿ ಠಾಣೆಗೆ ಕರೆದೊಯ್ದದರು. ಈ ವೇಳೆ, ಮಾತನಾಡಿದ ಪಿಎಫ್ಐ ಬೆಳಗಾವಿ ಜಿಲ್ಲಾಧ್ಯಕ್ಷ ನವೀದ್ ಕಟಗಿ, ಎನ್ಐಎ ನಮ್ಮ ಜಿಲ್ಲಾ ಮುಖಂಡರು, ರಾಜ್ಯ ಮುಖಂಡರ ಮನೆ ಮೇಲೆ ದಾಳಿ ಮಾಡಿದೆ. ಅಮಿತ್ ಶಾ ಸಲಹೆ ಮೇರೆಗೆ ರೇಡ್ ಮಾಡಿದ್ದಾರೆ, ನಮ್ಮ ಬಗ್ಗೆ ಯಾವುದೇ ದಾಖಲೆ ಇಲ್ಲದೇ ಸುಳ್ಳು ಆರೋಪ ಮಾಡ್ತಿದ್ದಾರೆ .ಹೀಗಾಗಿ ಇಂದು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದೇವೆ ಎಂದು ಹೇಳಿದರು.
ವಾಣಿಜ್ಯನಗರಿಯಲ್ಲಿ ಎಸ್ ಡಿಪಿಐ ಪ್ರತಿಭಟನೆ : ಪೊಲೀಸರಿಂದ ಲಘು ಲಾಠಿ ಪ್ರಹಾರ: ಎನ್ ಐಎ ದಾಳಿ ವಿಚಾರವಾಗಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲೂ ಎಸ್ ಡಿಪಿಐ ಹಾಗೂ ಪಿಎಫ್ ಐ ಕಾರ್ಯಕರ್ತರು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ನಗರದ ಕೌಲ್ ಪೇಟೆಯಲ್ಲಿ ಪ್ರತಿಭಟನೆ ನಡೆಸಿದ್ದು, ಪುಣೆ ಬೆಂಗಳೂರು ಮುಖ್ಯ ರಸ್ತೆ ಬಂದ್ ಮಾಡಿ ಪ್ರತಿಭಟನೆಗೆ ಮುಂದಾದ ಕಾರ್ಯಕರ್ತರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಪ್ರತಿಭಟನೆಯ ಸಂದರ್ಭ ಪ್ರತಿಭಟನಾಕಾರರು ಗೋ ಬ್ಯಾಕ್ ಎನ್ಐಎ ಗೋ ಬ್ಯಾಕ್ ಎನ್ಐಎ ಎಂದು ಘೋಷಣೆ ಕೂಗಿದರು.ರಸ್ತೆ ತಡೆ ನಡೆಸಿ ಪ್ರತಿಭಟನೆಗೆ ಮುಂದಾಗಿದ್ದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದು, ಕೆಲಕಾಲ ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿತ್ತು.
ಶಿವಮೊಗ್ಗದಲ್ಲಿ ಶಾಹೀದ್ ಖಾನ್ ಬಂಧನ ವಿರೋಧಿಸಿ ಪಿಎಫ್ಐ ಪ್ರತಿಭಟನೆ : ಶಿವಮೊಗ್ಗ ವಲಯದ ಪಿಎಫ್ಐ ಅಧ್ಯಕ್ಷ ಶಾಹೀದ್ ಖಾನ್ ಬಂಧನ ವಿರೋಧಿಸಿ, ಶಿವಮೊಗ್ಗದಲ್ಲಿ ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾ ಪ್ರತಿಭಟನೆ ನಡೆಸಿದೆ. ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ಪಿಎಫ್ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶಾಹೀದ್ ಖಾನ್ ರವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು. ಅವರು ಸಮಾಜದಲ್ಲಿ ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ಅನೇಕ ಸಹಾಯವನ್ನು ಮಾಡಿದ್ದಾರೆ. ಆದರೆ ಬಿಜೆಪಿ ಸರ್ಕಾರ ಧರ್ಮದ ಮೇಲೆ ಬಂಧನ ಮಾಡುತ್ತಿದೆ. ಇದು ಸಮಾಜಕ್ಕೆ ಕೆಟ್ಟ ಸಂದೇಶವನ್ನು ನೀಡುತ್ತಿದೆ. ಇದರಿಂದ ಸಮಾಜದಲ್ಲಿ ಅಶಾಂತಿಯನ್ನುಂಟಾಗುತ್ತದೆ. ಇದರಿಂದ ತಕ್ಷಣ ನಮ್ಮ ನಾಯಕರಾದ ಶಾಹೀದ್ ಖಾನ್ ರನ್ನು ಬಿಡುಗಡೆ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಿಂದ ಕೆಲ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.
ಇದನ್ನೂ ಓದಿ :ಉಗ್ರ ಚಟುವಟಿಕೆಗಳಿಗೆ ಹಣ ಫಂಡಿಂಗ್ ಆರೋಪ: ಯಾಸಿರ್ ಹಸನ್ ಬಂಧಿಸಿದ ಎನ್ಐಎ