ಬೆಳಗಾವಿ : ಲಕ್ಷ್ಮಣ ಸವದಿ ಬರುವುದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ನಮ್ಮ ಪಕ್ಷಕ್ಕೆ ಶಕ್ತಿ ಬರುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಬೆಳಗಾವಿಯಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಲಕ್ಷ್ಮಣ ಸವದಿ ಹಿರಿಯ ನಾಯಕರು. ಉಪಮುಖ್ಯಮಂತ್ರಿ ಆಗಿದ್ದವರು, ಇಂದು ನಮ್ಮ ಪಕ್ಷ ಸೇರಿದ್ದಾರೆ. ಬೆಳಗ್ಗೆ ನಮ್ಮ ಮನೆಗೂ ಬಂದಿದ್ದರು. ಅವರ ಜೊತೆಗೆ ಮಾತಾಡಿದ್ದೇವೆ. ಅವರಿಗೆ ಅಥಣಿ ಕ್ಷೇತ್ರದ ಟಿಕೆಟ್ ಕೊಡಬೇಕೆಂದು ತೀರ್ಮಾನ ಮಾಡಿದ್ದೇವೆ ಎಂದರು.
ಏನಾದರೂ ಷರತ್ತು ವಿಧಿಸಿ ಸವದಿ ಕಾಂಗ್ರೆಸ್ ಸೇರಿದ್ದಾರಾ? ಎಂಬ ಪ್ರಶ್ನೆಗೆ, ಯಾವುದೇ ಷರತ್ತು ಹಾಕಿಲ್ಲ. ಆದರೆ ನನ್ನನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಮತ್ತು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಅಥಣಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಿಕೊಡಬೇಕೆಂದು ಕೇಳಿಕೊಂಡಿದ್ದಾರೆ ಎಂದ ಹೇಳಿದರು.
ಉತ್ತರ ಕರ್ನಾಟಕದಲ್ಲಿ ಮತ್ಯಾರಾದರೂ ಲಿಂಗಾಯತ ನಾಯಕರು ನಿಮ್ಮ ಸಂಪರ್ಕದಲ್ಲಿದ್ದಾರಾ? ಎಂಬ ಪಶ್ನೆಗೆ, ಬೇರೆ ಯಾರೂ ಇಲ್ಲ. ಬಂದರೆ ನಿಮಗೆ ಹೇಳುತ್ತೇವೆ ಎಂದರು. ಪ್ರಜಾಧ್ವನಿ ಯಾತ್ರೆ ಮಳೆಯಿಂದ ರದ್ದಾಗಿದ್ದು, ನಾಳೆ ಮತ್ತೆ ಸಮಾವೇಶ ಮಾಡುತ್ತೀರಾ ಎಂಬ ಬಗ್ಗೆ ಕೇಳಿದಾಗ, ನಾಳೆ ಇಲ್ಲಿ ಇಲ್ಲ, ಬೇರೆ ಕಡೆ ಇದೆ ಎಂದರು.
ನಿನ್ನೆ ಮೀಟಿಂಗ್ ಆಗಿದೆ. ನಾಳೆ ಅಥವಾ ನಾಡಿದ್ದು ಮೂರನೇ ಪಟ್ಟಿ ರಿಲೀಸ್ ಆಗುತ್ತದೆ ಎಂದ ಸಿದ್ದರಾಮಯ್ಯ, ಬಿಜೆಪಿಯೊಳಗಿನ ಬಂಡಾಯ ಕಾಂಗ್ರೆಸ್‌ಗೆ ಲಾಭ ಆಗುತ್ತಾ ಎಂಬ ಪ್ರಶ್ನೆಗೆ, ನಾವು ಯಾವಾಗಲೂ ನೆಗೆಟಿವ್ ಲಾಭ ಲೆಕ್ಕ ಹಾಕಲ್ಲ. ಪಾಸಿಟಿವ್ ಲಾಭ ಮಾತ್ರ ಲೆಕ್ಕ ಹಾಕೋದು. ಜನ ಇವತ್ತು ಬಿಜೆಪಿ ತಿರಸ್ಕಾರ ಮಾಡಲು ತೀರ್ಮಾನ ಮಾಡಿದ್ದಾರೆ ಎಂದು ತಿಳಿಸಿದರು.
ಇನ್ನೂ ಬರುವವರಿದ್ದಾರೆ -ಸಿದ್ಧರಾಮಯ್ಯ: ಸಾಮೂಹಿಕವಾಗಿ ಶಾಸಕರು, ಎಂಎಲ್ಸಿಗಳು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವ ವಿಚಾರಕ್ಕೆ, ಕಾಂಗ್ರೆಸ್ ಪರವಾಗಿ ರಾಜ್ಯದಲ್ಲಿ ಅಲೆ ಶುರುವಾಗಿದೆ. ರಾಜ್ಯದ ಜನ ಬದಲಾವಣೆ ಬಯಸಿದ್ದಾರೆ. ಬಿಜೆಪಿ ಸರ್ಕಾರದಿಂದ ಬೇಸತ್ತಿದ್ದಾರೆ. ಅವರ ಭ್ರಷ್ಟಾಚಾರ, ದುರಾಡಳಿತ, ಬೆಲೆ ಏರಿಕೆ, ನಿರುದ್ಯೋಗ, ರೈತರ ಸಮಸ್ಯೆಗಳು ಸೇರಿ ಒಂದಲ್ಲ ಎರಡಲ್ಲ, ಅನೇಕ ಸಮಸ್ಯೆಗಳಿಂದ ಜನ ಬೇಸತ್ತಿದ್ದಾರೆ. ಹೀಗಾಗಿ ಕೇವಲ ಟಿಕೆಟ್ ಸಿಗಲಿಲ್ಲ ಅಂತ ಮಾತ್ರ ಬರುತ್ತಿಲ್ಲ. ಬಹಳ ಜನ ಟಿಕೆಟ್ ಘೋಷಣೆ ಮಾಡುವ ಮೊದಲೇ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದರು ಎಂದರು. ಇನ್ನೂ ಬರುವವರ ಸಂಖ್ಯೆ ಇದೆ ಹೇಳುತ್ತೇವೆ ಎಂದು ಹೊಸ ಬಾಂಬ್ ಸಿಡಿಸಿದರು.
ಇದನ್ನೂ ಓದಿ : ಸೋತಿದ್ದ ಸವದಿಯನ್ನು ಅಟ್ಟಕ್ಕೇರಿಸಿ ಕಡೆಗಣಿಸಿದ ಹೈಕಮಾಂಡ್: ಟಿಕೆಟ್ ಸಿಗದೆ 'ಕೈ' ಸೇರಿದ ಸವದಿ