ಬೆಳಗಾವಿ: ರಾಸಲೀಲೆ ಸಿಡಿ ಕೇಸ್ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಅಸಹಕಾರ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕಂಟಕವಾಗಿದೆ. ಸಿಡಿ ಜಾಲದಿಂದ ಪಾರಾಗಲು ಇದೀಗ ರಮೇಶ್ ಜಾರಕಿಹೊಳಿ ಹೊಸ ತಂತ್ರ ಹೆಣೆಯಲು ಸಜ್ಜಾಗಿದ್ದಾರೆ ಎನ್ನಲಾಗ್ತಿದೆ. ಇವತ್ತು ದಿಢೀರ್ ಮುಂಬೈಗೆ ಹಾರುವ ಮೂಲಕ ರಮೇಶ್ ಜಾರಕಿಹೊಳಿ ಅಚ್ಚರಿ ಮೂಡಿಸಿದ್ದಾರೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಮುಂಬೈಗೆ ತೆರಳಿರುವ ರಮೇಶ್ ಜಾರಕಿಹೊಳಿ ಸಂಜೆ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಸರ್ಕಾರದ ರಚನೆ ವೇಳೆ ನನ್ನನ್ನು ಬಳಸಿಕೊಂಡ ಬಿಜೆಪಿ ನಾಯಕರು ಇದೀಗ ನನ್ನ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಸಿಡಿ ಪ್ರಕರಣದಿಂದ ಪಾರಾಗಲು ನನಗೆ ಸರ್ಕಾರದ ಸಹಕಾರ ಮುಖ್ಯ. ಆದರೆ ಸರ್ಕಾರದದಿಂದ ನನಗೆ ಯಾವುದೇ ಸಹಕಾರ ಸಿಗುತ್ತಿಲ್ಲ. ಈ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿಗೆ ನಿರ್ದೇಶನ ನೀಡಲು ಹೈಕಮಾಂಡ್ ನಾಯಕರ ಮನವೊಲಿಸುವಂತೆ ದೇವೇಂದ್ರ ಫಡ್ನವಿಸ್ ಬಳಿ ರಮೇಶ್ ಮನವಿ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಇದಕ್ಕೂ ಮೊದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೊತೆಗೆ ಸರ್ಕಾರದ ಭಾಗವಾಗಿರುವ ಇಬ್ಬರು ಪ್ರಭಾವಿ ಸಚಿವರೇ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ಹೀಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾನೂನು ಹೋರಾಟದಲ್ಲಿ ತೊಡಗುತ್ತೇನೆ ಎಂದು ರಮೇಶ್ ಜಾರಕಿಹೊಳಿ ತಮ್ಮ ಆಪ್ತರ ಎದುರು ಅಳಲು ತೋಡಿಕೊಂಡಿದ್ದಾರೆ ಎಂದು ಮೂಲಗಳು 'ಈಟಿವಿ ಭಾರತ'ಕ್ಕೆ ತಿಳಿಸಿವೆ.
ಸಿಟ್ಟಾದ್ರಾ ಜಾರಕಿಹೊಳಿ:
ಹಿಂದಿನ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದ ರಮೇಶ್ ಜಾರಕಿಹೊಳಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾಗಿದ್ದರು. ಅಲ್ಲದೇ ಉಪಚುನಾವಣೆಯಲ್ಲಿ ಗೆದ್ದು ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಜಲಸಂಪನ್ಮೂಲ ಇಲಾಖೆಯಂತಹ ಬೃಹತ್ ಖಾತೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ರಾಸಲೀಲೆ ಸಿಡಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮುಜುಗರದಿಂದ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿ ಇದೀಗ ಎಸ್ಐಟಿ ತನಿಖೆ ಎದುರಿಸುತ್ತಿದ್ದಾರೆ. ಎಸ್ಐಟಿ ರಾಜ್ಯ ಸರ್ಕಾರದ ಅಧೀನದಲ್ಲಿದ್ದರೂ, ಸಿಡಿ ಪ್ರಕರಣದಲ್ಲಿ ನನಗೆ ಸರ್ಕಾರದಿಂದ ಸಹಕಾರ ಸಿಗುತ್ತಿಲ್ಲ ಎಂದು ರಮೇಶ್ ಜಾರಕಿಹೊಳಿ ಆಪ್ತರ ಮುಂದೆ ಹೇಳಿಕೊಂಡಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗೃಹಸಚಿವ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವು ನಾಯಕರ ವಿರುದ್ಧ ರಮೇಶ್ ಜಾರಕಿಹೊಳಿ ಸಿಟ್ಟಾಗಿದ್ದಾರೆ ಎನ್ನಲಾಗುತ್ತಿದೆ.
ರಮೇಶ್ ಜಾರಕಿಹೊಳಿ ರಾಜೀನಾಮೆ ತಂತ್ರ?
ಸಿಡಿ ಪ್ರಕರಣದಡಿ ರಾಜೀನಾಮೆ ನೀಡಿರುವ ರಮೇಶ್ ಜಾರಕಿಹೊಳಿ ಇದೀಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸುಳಿವು ನೀಡಿದ್ದಾರೆ. ಇದೇ ಜೂನ್ 23ಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ರಮೇಶ್ ಜಾರಕಿಹೊಳಿ ಆಪ್ತರ ಮುಂದೆ ಹೇಳಿಕೊಂಡಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ರೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುದು ರಮೇಶ್ ಜಾರಕಿಹೊಳಿ ಅವರಿಗೂ ಗೊತ್ತಿರುವ ವಿಷಯವೇ. ಆದರೆ ಸಿಡಿ ಕೇಸ್ನಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ಸರ್ಕಾರಕ್ಕೆ ಬ್ಲ್ಯಾಕ್ಮೇಲ್ ಮಾಡಲು ರಮೇಶ್ ಜಾರಕಿಹೊಳಿ ರಾಜೀನಾಮೆ ಅಸ್ತ್ರ ಪ್ರಯೋಗಿಸುತ್ತಿರಬಹುದು ಎಂದು ಜಿಲ್ಲೆಯಲ್ಲಿ ಚರ್ಚೆಗಳು ನಡೆಯುತ್ತಿವೆ. ಆದರೆ ಇಷ್ಟು ದಿನ ಸೈಲೆಂಟ್ ಇದ್ದ ರಮೇಶ್ ಜಾರಕಿಹೊಳಿ ದಿಢೀರ್ ಮುಂಬೈಗೆ ಹಾರುವ ಮೂಲಕ ರಾಜಕೀಯದಲ್ಲಿ ಮತ್ತೊಂದು ಸಂಚಲನ ಮೂಡಿಸಿದ್ದಾರೆ.