ಬೆಳಗಾವಿ: ಭೀಕರ ಪ್ರವಾಹದಿಂದ ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿರುವ ಜನರಿಗೆ ಸರ್ಕಾರ ಹತ್ತು ಸಾವಿರ ರೂ. ಪರಿಹಾರ ನೀಡುತ್ತಿದೆ. ಆದರೆ ರಾಮದುರ್ಗ ತಹಶೀಲ್ದಾರರು ಮಾತ್ರ ಸಹಿ ಮಾಡದೆ ನಿರಾಶ್ರಿತರಿಗೆ ಪರಿಹಾರ ಚೆಕ್ ನೀಡಿದ ಆರೋಪ ಕೇಳಿ ಬಂದಿದೆ.
ರಾಮದುರ್ಗದ ನೇಕಾರಪೇಠದ ಮಲ್ಲಿಕಾರ್ಜುನ ಕೊಣ್ಣೂರ ಎಂಬುವವರಿಗೆ ನೀಡಲಾದ ಚೆಕ್ನಲ್ಲಿ ರಾಮದುರ್ಗದ ಗ್ರೇಡ್ - 2 ತಹಶೀಲ್ದಾರ ವಿಜಯಕುಮಾರ್ ಕಡಕೋಳ ಸಹಿ ಮಾಡದೆ ಚೆಕ್ ನೀಡಿದ್ದಾರೆ ಎನ್ನಲಾಗಿದೆ.
ಮೊದಲಿಗೆ ಪರಿಹಾರ ನೀಡುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸತ್ತದೆ ಎಂಬ ಆಪಾದನೆ ಕೇಳಿ ಬಂದಿತ್ತು. ಇಂತಹ ಸಂದರ್ಭದಲ್ಲಿ ತಹಶೀಲ್ದಾರ ಈ ರೀತಿಯ ಯಡವಟ್ಟು ಮಾಡಿದ್ದನ್ನು ವಿರೋಧಿಸಿ ನಿರಾಶ್ರಿತರು ಆಕ್ರೋಶ ಹೊರ ಹಾಕಿದ್ದಾರೆ.
ಸಮಜಾಯಿಸಿ ನೀಡಿದ ತಹಶೀಲ್ದಾರ್: ರಾಮದುರ್ಗ ತಹಶೀಲ್ದಾರ ಬಸನಗೌಡ ಕೊಟೂರ್ ಅವರನ್ನು ಈ ಬಗ್ಗೆ ಕೇಳಿದಾಗ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, ಕಣ್ತಪ್ಪಿನಿಂದ ಈ ಘಟನೆ ನಡೆದಿದ್ದು, ರೈತರಿಗೆ ನೀಡಿದ ಚೆಕ್ ವಾಪಸ್ ಪಡೆದು ಮರಳಿ ಸಹಿ ಮಾಡಿದ ಚೆಕ್ ನೀಡಲಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.