ಬೆಳಗಾವಿ: ಸಿ.ಡಿ. ಪ್ರಕರಣದ ಯುವತಿಯ ಪೋಷಕರು ವಾಸವಿರುವ ಕುವೆಂಪು ನಗರದ ಬಾಡಿಗೆ ಮನೆಗೆ ಎಪಿಎಂಸಿ ಠಾಣೆ ಪೊಲೀಸರು ಬಿಗಿ ಭದ್ರತೆ ನೀಡಿದ್ದಾರೆ.
ಎಎಸ್‌ಐ ನೇತೃತ್ವದಲ್ಲಿ ಆರು ಪೊಲೀಸರಿಂದ ಭದ್ರತೆ ನೀಡಲಾಗಿದೆ. ಓರ್ವ ಎಎಸ್‌ಐ, ಓರ್ವ ಮಹಿಳಾ ಕಾನ್ಸ್ಟೇಬಲ್, ಇಬ್ಬರು ಹೆಡ್ ಕಾನ್ಸ್ಟೇಬಲ್, ಇಬ್ಬರು ಕಾನ್ಸ್ಟೇಬಲ್ಗಳನ್ನು ನಿಯೋಜಿಸಲಾಗಿದೆ. ಮನೆ ಎದುರು ಒಂದು ಪೊಲೀಸ್ ವಾಹನ ನಿಲ್ಲಿಸಲಾಗಿದೆ. ಕುಟುಂಬದ ಭೇಟಿಗೆ ಯಾರೇ ಬಂದರೂ ಮಾಹಿತಿ ನೀಡುವಂತೆ ಮೇಲಧಿಕಾರಿಗಳು ಸೂಚನೆ ನೀಡಿದ್ದಾರೆ. ಕುವೆಂಪು ನಗರದ ಮನೆಯಲ್ಲೀಗ ಯುವತಿಯ ತಂದೆ, ತಾಯಿ, ಇಬ್ಬರು ಸಹೋದರರು ಇದ್ದಾರೆ. ಬೆಳಗ್ಗೆ ಮನೆ ಸೇರಿರುವ ಕುಟುಂಬ ಸದಸ್ಯರು ಈವರೆಗೆ ಹೊರಬಂದಿಲ್ಲ.
ಓದಿ : ಬಿಗಿ ಭದ್ರತೆಯಲ್ಲಿ ಸಂತ್ರಸ್ತ ಯುವತಿಯ ಕುಟುಂಬಸ್ಥರನ್ನು ಬೆಳಗಾವಿಗೆ ಕರೆ ತಂದ ಎಸ್ಐಟಿ
ಕುಟುಂಬಸ್ಥರಿಂದ ಮತ್ತೊಂದು ದೂರು ಸಾಧ್ಯತೆ? : ಇಂದು ಬೆಳಗಾವಿ ಮನೆಗೆ ಸೇರಿರುವ ಸಂತ್ರಸ್ತೆ ಕುಟುಂಬ ಸದಸ್ಯರು ಇಲ್ಲಿನ ಎಪಿಎಂಸಿ ಠಾಣೆಯಲ್ಲಿ ಮತ್ತೊಂದು ದೂರು ದಾಖಲಿಸುವ ಸಾಧ್ಯತೆ ಇದೆ. ತಮ್ಮ ಪುತ್ರಿ ಕಿಡ್ನಾಪ್ ಆಗಿದ್ದಾಳೆ ಅಂತ ಮಾರ್ಚ್ 16ರಂದು ಯುವತಿ ಪೋಷಕರು ದೂರು ನೀಡಿದ್ದರು. ಅಲ್ಲದೆ ನಿನ್ನೆಯಷ್ಟೇ ಎಸ್ಐಟಿ ಮುಂದೆ ಹಾಜರಾಗಿ ಸುದ್ದಿಗೋಷ್ಠಿ ನಡೆಸಿದ್ದರು. ಇದೀಗ ಬೆಳಗಾವಿಗೆ ಬಂದಿರುವ ಪೋಷಕರು ನಾಳೆ, ನಾಡಿದ್ದು ಎಲ್ಲ ದಾಖಲೆ ನೀಡುವುದಾಗಿ ಹೇಳಿದ್ದಾರೆ. ದಾಖಲೆ ಬಿಡುಗಡೆ ಮಾಡಿ ಡಿಕೆಶಿ ವಿರುದ್ಧ ಪೋಷಕರು ದೂರು ದಾಖಲಿಸುವ ಸಾಧ್ಯತೆ ಇದೆ.