ಬೆಳಗಾವಿ : ಎಸ್‌ಆರ್‌ಪಿಸಿ/ ಐಆರ್‌ಪಿಸಿ ಮತ್ತು ಕೆಎಸ್‌ಆರ್‌ಪಿ ಪುರುಷ ಮತ್ತು ಮಹಿಳಾ ಕಾನ್‌ಸ್ಟೇಬಲ್ ಹುದ್ದೆಗಳಿಗಾಗಿ ನಡೆದ ಸಿಇಟಿ ಪರೀಕ್ಷೆಯಲ್ಲಿ ಮೂಲ ಅಭ್ಯರ್ಥಿಗಳ ಬದಲಾಗಿ ಪರೀಕ್ಷೆ ಬರೆಯುತ್ತಿದ್ದ ನಾಲ್ವರು ನಕಲಿ ಅಭ್ಯರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಗೋಕಾಕ್ ತಾಲೂಕು ಹಡಗಿನಾಳದ ಭೀಮಶಿ ಹುಲ್ಲೋಳಿ (24), ಬೆಣಚಿನಮರಡಿಯ ಸುರೇಶ ಕಡಬಿ (25), ಉದಗಟ್ಟಿಯ ಆನಂದ ಒಡೆಯರ್ (28) ಹಾಗೂ ಉದಗಟ್ಟಿಯ ಮೆಹಬೂಬ್ ಅಕ್ಕಿವಾಟ (23) ಬಂಧಿತರು. ಇವರು ಮೂಲ ಅಭ್ಯರ್ಥಿಗಳ ಬದಲಾಗಿ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿದ್ದ ವೇಳೆ ಪರೀಕ್ಷಾ ಮೇಲ್ವಿಚಾರಕರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಆರೋಪಿಗಳ ವಿರುದ್ಧ ಉದ್ಯಮಬಾಗ, ಮಾಳಮಾರುತಿ, ಟಿಳಕವಾಡಿ ಮತ್ತು ಶಹಾಪೂರ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಇಂದು ನಗರದ 39 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿದ್ದು, ಒಟ್ಟು 11,921 ಅಭ್ಯರ್ಥಿಗಳ ಪೈಕಿ 8,461 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.