ಬೆಳಗಾವಿ: ಈ ವರ್ಷ ಉತ್ತಮ ಮಳೆಯಾಗುತ್ತದೆ. ಎಲ್ಲ ಕಡೆ ನೀರು ಹರಿದಾಡುತ್ತದೆ. ಶೀತ ಬಾಧೆಯಿಂದ ರೋಗ ಬರುವ ಸಾಧ್ಯತೆ ಹೆಚ್ಚಿದೆ ಎಂದು ಹಾರನಹಳ್ಳಿ ಕೋಡಿ ಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ನಗರದ ಲಕ್ಷ್ಮೀ ಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಚಂದ್ರಶೇಖರ ಸ್ವಾಮೀಜಿಯಿಂದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಭೀಕರ ಬರಗಾಲದಿಂದ ರೈತಾಪಿ ಜನ ತತ್ತರಿಸಿ ಹೋಗಿದ್ದಾರೆ. ಈ ವರ್ಷ ಸಾಕಷ್ಟು ಮಳೆ, ಬೆಳೆ ಆಗುತ್ತದೆ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಮನುಷ್ಯನಿಗೆ ಹುಟ್ಟು, ಸಾವು ಮುಖ್ಯವಲ್ಲ. ಸಮಾಜಕ್ಕೆ ತನ್ನದೆಯಾದ ಕೊಡುಗೆ ನೀಡುವುದು ಮುಖ್ಯ. ಪ್ರಶಸ್ತಿ ಬರುತ್ತದೆ ಹೋಗುತ್ತದೆ. ಪ್ರಶಸ್ತಿಗಾಗಿ ಎಂದಿಗೂ ಕೆಲಸ ಮಾಡಬಾರದು. ಸತತವಾಗಿ ಕೆಲಸ ಮಾಡಿದರೆ ಪ್ರಶಸ್ತಿ ತಾನಾಗಿಯೇ ಒಲಿದು ಬರುತ್ತದೆ ಎಂದರು. ಕಾರ್ಯಕ್ರಮದಲ್ಲಿ ರಾಣಿ ಚನ್ನಮ್ಮ ವಿವಿಯ ಕುಲಪತಿ ಡಾ. ಶಿವಾನಂದ ಹೊಸಮನಿ ಭಾಗಿಯಾಗಿದ್ದರು.