ಅಥಣಿ(ಬೆಳಗಾವಿ): ಸರ್ಕಾರಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಕಾರಣಕ್ಕೆ ಬೆಳೆದು ನಿಂತ ಹಲವು ಬೆಳೆಗಳನ್ನು ಅಥಣಿ ತಹಶೀಲ್ದಾರ್ ಸುರೇಶ್ ಮುಂಜೇಯವರು ಜೆಸಿಬಿ ಮುಖಾಂತರ ಪೈರನ್ನು ನೆಲಸಮಗೊಳಿಸಿ ಅಧಿಕಾರದ ದರ್ಪ ಮೆರೆದಿದ್ದಾರೆ ಎಂದು ರೈತರು ಗಂಭೀರ ಆರೋಪ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಸರ್ವೆ ನಂಬರ್ 1138 ರಿಂದ 20 ವರೆಗಿನ ರೈತರ ಬೆಳೆಯನ್ನು ಮಾಹಿತಿ ನೀಡದೇ ಜೆಸಿಬಿ ಮೂಲಕ ನಾಶಪಡಿಸಿದ್ದಾರೆಂದು ರೈತರು ಅಧಿಕಾರಿಗಳ ವಿರುದ್ಧ ರೈತರು ಗರಂ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆ ಸರ್ವೆ ಮಾಡುತ್ತೇವೆ ಎಂದು ನೋಟಿಸ್ ಜಾರಿ ಮಾಡಿ ಪೊಲೀಸ್ ಬಳಸಿಕೊಂಡು ಅಥಣಿ ತಹಶೀಲ್ದಾರ್ ಹಾಗೂ ಐಗಳಿ ಪಿಎಸ್ಐ ಅವಾಚ್ಯ ಶಬ್ದಗಳಿಂದ ನಿಂದಿಸಿ ನಮ್ಮ ಬೆಳೆಗಳನ್ನು ನಾಶಪಡಿಸಿದ್ದಾರೆ ಎಂದು ರೈತರು ಆರೋಪ ಮಾಡಿದ್ದಾರೆ.
ಕಳೆದ 40 ವರ್ಷಗಳ ಹಿಂದೆ ಈ ರಸ್ತೆ ಕೃಷಿ ಜಮೀನುಗಳಾಗಿ ಮಾರ್ಪಾಟಾಗಿದೆ. ನಾವು ರಸ್ತೆ ನಿರ್ಮಾಣಕ್ಕೆ ಯಾವುದೇ ತಡೆ ಒಡ್ಡುವುದಿಲ್ಲ. ಬೆಳೆದ ಬೆಳೆಯನ್ನು ತೆಗೆದುಕೊಳ್ಳುತ್ತೇವೆ ಕಾಲಾವಕಾಶ ನೀಡಿ ಎಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಲು ಯಾವುದಕ್ಕೂ ಸ್ಪಂದನೆ ನೀಡಲಿಲ್ಲ ಎಂದು ರೈತರಾದ ಸಾಬು ಮಾಳಿ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಹಶೀಲ್ದಾರ್ ತಮ್ಮ ಜಾತಿಯವರಿಗೆ ಅನುಕೂಲ ಮಾಡಿ ಕೊಡುವ ದೃಷ್ಟಿಯಿಂದ ಈ ದುರ್ವರ್ತನೆ ತೋರುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಆರೋಪಕ್ಕೆ ಅಥಣಿ ತಹಶೀಲ್ದಾರ್ ಸುರೇಶ್ ಮುಂಜೆ ಪ್ರತಿಕ್ರಿಯೆಸಿ ಹಲವಾರು ವರ್ಷಗಳಿಂದ ಕೆಲವು ರೈತರು ಸರ್ಕಾರಿ ರಸ್ತೆಗೆ ಬೇಡಿಕೆ ಇಟ್ಟಿದ್ದರು, ಒತ್ತುವರಿ ಮಾಡಿಕೊಂಡ ರೈತರಿಗೆ ನಾವು ನೋಟಿಸ್ ನೀಡಿ ಸರ್ಕಾರಿ ರಸ್ತೆಯನ್ನು ಮರುಸ್ಥಾಪನೆ ಮಾಡಿದ್ದೇವೆ. ಬೆಳೆ ಪರಿಹಾರ ಕೊಡುವ ಪ್ರಶ್ನೆ ಇಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.
ಇದನ್ನೂ ಓದಿ: ದಸರಾದಲ್ಲಿ ಭಾಗವಹಿಸುತ್ತಿದ್ದ ಸಾಕಾನೆ ಗೋಪಾಲಸ್ವಾಮಿ ಕಾಡಾನೆ ದಾಳಿಗೆ ಬಲಿ