ಚಿಕ್ಕೋಡಿ(ಬೆಳಗಾವಿ): ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮಹಾರಾಷ್ಟ್ರದ ಎಲ್ಲಾ ಡ್ಯಾಂ-ಬ್ಯಾರೇಜ್‌ಗಳು ಭರ್ತಿಯಾಗಿದ್ದು, ಕರ್ನಾಟಕ ಗಡಿಯ ಚಿಕ್ಕೋಡಿ ಉಪ ವಿಭಾಗದ ರೈತರು ಬೇಸಿಗೆಯಲ್ಲಿ ನೀರಿಗಾಗಿ ಚಿಂತೆ ಮಾಡಬೇಕಾಗಿಲ್ಲ.
ಮಹಾರಾಷ್ಟ್ರದ ಕೊಯ್ನಾ, ಮಹಾಬಲೇಶ್ವರ, ವಾರಣಾ, ರಾಧಾನಗರ, ಅಂಬಾ, ಧೂಮ್, ನವಜಾ, ಕಾಳಮ್ಮವಾಡಿ, ಕೊಲ್ಲಾಪೂರ, ಸಾಂಗಲಿ ಜಿಲ್ಲೆಯಲ್ಲಿ ಈ ವರ್ಷ ಸುರಿದ ಮಳೆಯಿಂದಾಗಿ ಮಹಾರಾಷ್ಟ್ರದ ಜಲಾಶಯಗಳು ಭರ್ತಿಯಾಗಿದ್ದು, ಮಹಾರಾಷ್ಟ್ರದ ಗಡಿಯಲ್ಲಿರುವ ಚಿಕ್ಕೋಡಿ ಉಪ ವಿಭಾಗದ ಅಥಣಿ, ಕಾಗವಾಡ, ರಾಯಬಾಗ, ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ ಗ್ರಾಮದ ಜನರಿಗೆ ಬರುವ ಬೇಸಿಗೆಯಲ್ಲಿ ನೀರಿನ ಕೊರತೆ ನೀಗಲಿದೆ.
ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ ವೇದಗಂಗಾ, ದೂಧಗಂಗಾ, ಪಂಚಗಂಗಾ, ಚಕೋತ್ರ ಹಾಗೂ ಕೃಷ್ಣಾ ನದಿ ಹೀಗೆ ಒಟ್ಟು ಐದು ನದಿಗಳು ಹರಿಯುತ್ತವೆ. ಈ ಐದು ನದಿಗಳು ಮಹಾರಾಷ್ಟ್ರದ ಮೇಲೆ ಅವಲಂಬಿತವಾಗಿದ್ದು, ಮಹಾರಾಷ್ಟ್ರದ ಡ್ಯಾಂಗಳು ಭರ್ತಿಯಾದರೆ ಮಾತ್ರ ಚಿಕ್ಕೋಡಿ, ನಿಪ್ಪಾಣಿ ಭಾಗದ ನದಿಗಳಿಗೆ ನೀರು. ಈ ಬಾರಿ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಚನ್ನಾಗಿ ಆಗಿದ್ದು, ಚಿಕ್ಕೋಡಿ, ನಿಪ್ಪಾಣಿ ಭಾಗದ ರೈತರ ಮೊಗದಲ್ಲಿ ಹರ್ಷ ಮೂಡಿಸಿದೆ.
ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಹರಿದು ಬರುವ ನೀರು:
ಮಹಾರಾಷ್ಟ್ರದ ಕೊಯ್ನಾ, ಕಾಳಮ್ಮವಾಡಿ, ರಾಜಾಪೂರ, ರಾಧಾನಗರ, ವಾರಣಾ, ಧೂಮ್, ನವಜಾ, ಪಾಟಗಾಂವ, ಕಾಸಾರ, ರಾಜಾಪೂರ, ಡ್ಯಾಂಗಳಿಂದ ಕರ್ನಾಟಕಕ್ಕೆ ನೀರು ಹರಿದು ಬರುತ್ತದೆ.
ಮಹಾರಾಷ್ಟ್ರದಲ್ಲಿರುವ ಜಲಾಶಯಗಳ ನೀರಿನ ಮಟ್ಟ:
ಕೊಯ್ನಾ ಜಲಾಶಯ 105.23 ಟಿಎಂಸಿ ಸಾಮರ್ಥ್ಯವಿದ್ದು, 105.05ರಷ್ಟು ಸಂಗ್ರಹವಾಗಿ, 100ರಷ್ಟು ಭರ್ತಿಯಾಗಿದೆ. ವಾರಣಾ ಜಲಾಶಯ 34.02 ಟಿಎಂಸಿ ಸಾಮರ್ಥ್ಯವಿದ್ದು, 34.32ರಷ್ಟು ಸಂಗ್ರಹವಾಗಿ, 100ರಷ್ಟು ಭರ್ತಿಯಾಗಿದೆ. ರಾಧಾನಗರಿ ಜಲಾಶಯ 8.36 ಟಿಎಂಸಿ ಸಾಮರ್ಥ್ಯವಿದ್ದು, 8.25ರಷ್ಟು ಸಂಗ್ರಹವಾಗಿ, 99ರಷ್ಟು ಭರ್ತಿಯಾಗಿದೆ. ಕಣೇರ ಜಲಾಶಯ 10.10 ಟಿಎಂಸಿ ಸಾಮರ್ಥ್ಯವಿದ್ದು, 9.94ರಷ್ಟು ಸಂಗ್ರಹವಾಗಿ, 98ಷ್ಟು ಭರ್ತಿಯಾಗಿದೆ. ಧೂಮ ಜಲಾಶಯ 13.05 ಟಿಎಂಸಿ ಸಾಮರ್ಥ್ಯವಿದ್ದು, 13.25 ಟಿಎಂಸಿ ಸಂಗ್ರಹವಾಗಿ, 98ರಷ್ಟು ಭರ್ತಿಯಾಗಿದೆ. ಪಾಟಗಾಂವ ಜಲಾಶಯ 3.716 ಟಿಎಂಸಿ ಸಾಮರ್ಥ್ಯವಿದ್ದು, 3.72 ಟಿಎಂಸಿ ಸಂಗ್ರಹವಾಗಿ, 100ರಷ್ಟು ಭರ್ತಿಯಾಗಿದೆ. ದೂಧಗಂಗಾ ಜಲಾಶಯ 25.40 ಟಿಎಂಸಿ ಸಾಮರ್ಥ್ಯವಿದ್ದು, 25.39 ಟಿಎಂಸಿ ಸಂಗ್ರಹವಾಗಿ, 100ರಷ್ಟು ಭರ್ತಿಯಾಗಿದೆ.