ಚಿಕ್ಕೋಡಿ: ಪಡಿತರ ಚೀಟಿ ಇಲ್ಲದವರಿಗೆ ಕೂಡಲೇ ಕಾರ್ಡ್ ವಿತರಣೆ ಕಲ್ಪಿಸುವಂತೆ ಚಿಕ್ಕೋಡಿ ತಹಶೀಲ್ದಾರ್ ಸುಭಾಷ್ ಸಂಪಗಾವಿ ಅವರಿಗೆ ಶಾಸಕ ಗಣೇಶ ಹುಕ್ಕೇರಿ ಸೂಚಿಸಿದರು.
ಪಟ್ಟಣದ ಪರಟಿನಾಗಲಿಂಗೇಶ್ವರ ದೇವಸ್ಥಾನದಲ್ಲಿ ಕೊರೊನಾ ಮುಂಜಾಗೃತೆ ಕುರಿತು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ 19 ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ 50 ಲಕ್ಷ ರೂ. ಬಿಡುಗಡೆ ಮಾಡಿದ್ದು, 17.48 ಲಕ್ಷ ರೂ. ಖರ್ಚ ಮಾಡಲಾಗಿದೆ. ಇದರಲ್ಲಿ ಆರೋಗ್ಯ ಇಲಾಖೆಗೆ 15 ಲಕ್ಷ ರೂ., ಪುರಸಭೆ, ಪಡಿತರ ವಿತರಣೆ ಸೇರಿ ಇತರೆ ಕಾರ್ಯಗಳಿಗೆ 2.25 ಲಕ್ಷ ರೂ. ವಿನಿಯೋಗಿಸಿ, 31 ಲಕ್ಷ ರೂ. ಸರ್ಕಾರಕ್ಕೆ ಮರಳಿಸಲಾಗಿದೆ ಎಂದರು.
ಪಟ್ಟಣದಲ್ಲಿ ಕೋವಿಡ್- 19 ಸೋಂಕಿತರ ಚಿಕಿತ್ಸೆಗೆ ಪ್ರತ್ಯೇಕ ಕೊಠಡಿ ತೆರೆಯಬೇಕು. ಸಾರ್ವಜನಿಕ ಆಸ್ಪತ್ರೆಯಲ್ಲಿ ಸರ್ಜನ್ ವೈದ್ಯರಿಲ್ಲ. ಆದಷ್ಟು ಬೇಗ ನಿಯೋಜನೆ ಮಾಡುವಂತೆ ಸೂಚಿಸಿದರು.