ಬೆಳಗಾವಿ: ''ನಾನಾಗಿ ದೆಹಲಿಗೆ ಹೋಗುತ್ತಿಲ್ಲ. ದೆಹಲಿ ಕರೆ ಬಂದ ಬಳಿಕ ಹೋಗುತ್ತೇನೆ. ಆಗ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗೃಹ ಸಚಿವರನ್ನು ಭೇಟಿಯಾಗಲು ತೆರಳುತ್ತೇನೆ. ಪಕ್ಷದ ಕಚೇರಿಯಿಂದ ಕರೆ ಬಂದಿದೆ. ವಿ. ಸೋಮಣ್ಣ, ರಮೇಶ್ ಜಾರಕಿಹೊಳಿಗೂ ಹೇಳಿರಬಹದು. ಆದರೆ, ದೆಹಲಿಗೆ ಹೋಗುವುದಂತೂ ನಿಶ್ಚಿತ, ಖಚಿತ'' ಎಂದು ಶಾಸಕ ಬಸನಗೌಡ ಯತ್ನಾಳ್ ಹೇಳಿದ್ದಾರೆ.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ''ಸೋಮಣ್ಣ ಕಾರಣಾಂತರಗಳಿಂದ ಅವರು ಅವರ ತೀರ್ಮಾನವನ್ನು ಮುಂದೂಡಿದ್ದಾರೆ. ಭೇಟಿಯಾದಾಗ ಕರ್ನಾಟಕದ ಪರಿಸ್ಥಿತಿಯನ್ನು ಹೇಳುತ್ತೇನೆ. ಕರ್ನಾಟಕದಲ್ಲಿ ಏನು ನಡೆದಿದೆ. ನಮ್ಮ ಪಕ್ಷ ಈ ಮಟ್ಟಿಗೆ ಬರಲು ಇಬ್ಬರು ಮಹಾನುಭಾವರು ಕಾರಣ. ಒಬ್ಬ ದೆಹಲಿ ಮಹಾನುಭಾವರು. ಇನ್ನೊಬ್ಬರು ಕರ್ನಾಟಕದವರು. ಇಬ್ಬರು ಸಿಂಗ್ಗಳು ಆಗಿದ್ದಾರೆ. ಅವರಿಂದ ಪಕ್ಷವು ಹಾಳಾಗಿದೆ'' ಎಂದರು.
ಉಪನಾಯಕನ ಸ್ಥಾನಕ್ಕೆ ಏನಿದೆ ಬೆಲೆ?: ಬೆಲ್ಲದ್ ಅವರನ್ನು ಉಪನಾಯಕನಾಗಿ ಆಯ್ಕೆ ಮಾಡುವ ಸಾಧ್ಯತೆ ಬಗ್ಗೆ ಪ್ರತಿಕ್ರಿಯಿಸಿ, ಯಾರನ್ನೂ ಬಾಯಿ ಮುಚ್ಚಿಸಿದರೂ ನನ್ನನ್ನು ಬಾಯಿ ಮುಚ್ಚಿಸಲು ಆಗಲ್ಲ. ಉಪನಾಯಕನ ಸ್ಥಾನಕ್ಕೆ ಏನಿದೆ ಬೆಲೆ. ಅದರಲ್ಲೇನಿದೆ ಬದನೇಕಾಯಿ? ಬರೇ ಕುರ್ಚಿ ಕೊಟ್ಟು ಕೂರಿಸ್ತಾರೆ. ಉಪನಾಯಕನಾದರೆ ಅವರ ಮಾರ್ಯಾದೆ ಅವರೇ ಕಳೆದುಕೊಳ್ಳುತ್ತಾರೆ. ನಮ್ಮ ಸಮಾಜದ ಮರ್ಯಾದೆ ಕಳೆದುಕೊಳ್ಳುತ್ತಾರೆ'' ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು. ''ನಾನು ಭಿಕ್ಷೆ ಬೇಡಿ ಹೋಗಲ್ಲ. ಮಂತ್ರಿನೇ ಬೇಡ ಅಂದಿದ್ದೆ ಯಡಿಯೂರಪ್ಪಗೆ. ನಾನು ವಾಜಪೇಯಿ ಅಡಿ ಮಂತ್ರಿಯಾಗಿ ಕೆಲಸ ಮಾಡಿದವನು, ನಿಮ್ಮಂತವರ ಕೈಯಡಿ ಕೆಲಸ ಮಾಡಲ್ಲ ಅಂದಿದ್ದೆ'' ಎಂದು ತಿಳಿಸಿದರು.
ಇದನ್ನೂ ಓದಿ: ದಲಿತರನ್ನು ಆರ್ಎಸ್ಎಸ್ ಮುಖ್ಯಸ್ಥರನ್ನಾಗಿ ನೇಮಕ ಮಾಡಲಿ: ಸಚಿವ ಪ್ರಿಯಾಂಕ್ ಖರ್ಗೆ ಸವಾಲು