ಬೆಳಗಾವಿ/ಬೆಂಗಳೂರು : ಸಾರಿಗೆ ಇಲಾಖೆಯಲ್ಲಿ ಹೊಸದಾಗಿ ಆರ್ಟಿಓ ಕಚೇರಿಗಳನ್ನು ಆರಂಭಿಸುವ ಪ್ರಸ್ತಾವನೆ ಇಲ್ಲ ಎಂದು ಸಾರಿಗೆ ಸಚಿವ ಶ್ರೀರಾಮುಲು ವಿಧಾನಸಭೆಯಲ್ಲಿ ಇಂದು ತಿಳಿಸಿದರು.
ಪ್ರಶ್ನೋತ್ತರ ವೇಳೆ ಬಿಜೆಪಿ ಸದಸ್ಯ ಸುಕುಮಾರಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇನ್ನು ಮುಂದೆ ಆರ್ಟಿಓ ಕಚೇರಿ ತೆರೆಯುವುದಿಲ್ಲ. ಸಾರಿಗೆ ಇಲಾಖೆಯಲ್ಲಿ ಹಲವು ಸೇವೆಗಳನ್ನು ಆನ್ಲೈನ್ ಸೇವೆಗಳನ್ನಾಗಿ ಮಾಡಲಾಗಿದೆ. ಇದರ ಜೊತೆಗೆ ಗ್ರಾಮ ಒನ್ ಹಾಗೂ ಜನಸೇವಕ ಯೋಜನೆಗಳಿಂದಲೂ ಸಾರಿಗೆ ಇಲಾಖೆಯ ಸೇವೆಗಳನ್ನು ಸಾರ್ವಜನಿಕರಿಗೆ ತಲುಪಿಸಲಾಗುತ್ತಿದೆ. ಹಾಗಾಗಿ, ಪ್ರಸ್ತುತ ಯಾವುದೇ ಹೊಸ ಕಚೇರಿಗಳನ್ನು ಆರಂಭಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಿದರು.
ಕುಂದಾಪುರದಲ್ಲಿ ಆರ್ಟಿಓ ಕಚೇರಿ ಆರಂಭಿಸುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಸಾರಿಗೆ ಇಲಾಖೆಯ 30 ಸೇವೆಗಳನ್ನು ಆನ್ಲೈನ್ ಸೇವೆಗಳನ್ನಾಗಿ ಪರಿವರ್ತಿಸಲಾಗಿದೆ. ಹಾಗಾಗಿ, ಸಾರ್ವಜನಿಕರ ಕಚೇರಿಗೆ ಭೇಟಿ ನೀಡುವ ಅಗತ್ಯ ಇರುವುದಿಲ್ಲ. ಇದನ್ನೆಲ್ಲ ಮನಗಂಡು ಹೊಸ ಸಾರಿಗೆ ಕಚೇರಿಗಳನ್ನು ಆರಂಭಿಸುತ್ತಿಲ್ಲ ಎಂದು ಸದನಕ್ಕೆ ತಿಳಿಸಿದರು.
ಇದನ್ನೂ ಓದಿ: ಸಭಾಪತಿ ಸ್ಥಾನದ ಮೇಲೆ ನಾವೂ ಕಣ್ಣು ಹಾಕಿದವರೇ, ಆದರೆ ಯೋಗ ಬೇಕಲ್ಲ: ಆಯನೂರು ಮಂಜುನಾಥ್