ಬೆಳಗಾವಿ: "1ರಿಂದ 10 ಹೆಚ್ಪಿ ವಿದ್ಯುತ್ ಸಂಪರ್ಕ ಪಡೆದ ವಿದ್ಯುತ್ ಚಾಲಿತ ಮಗ್ಗ ಘಟಕಗಳಿಗೆ ಉಚಿತವಾಗಿ ವಿದ್ಯುತ್ ಪೂರೈಸಿ ಶೂನ್ಯ ಬಿಲ್ ನೀಡಲಾಗುವುದು. ಈ ಕುರಿತು ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ" ಎಂದು ಜವಳಿ ಸಚಿವ ಶಿವಾನಂದ ಪಾಟೀಲ್ ವಿಧಾನಸಭೆಯಲ್ಲಿ ಇಂದು ತಿಳಿಸಿದರು. ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಶಾಸಕ ಧೀರಜ್ ಮುನಿರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, "10ಕ್ಕಿಂತ ಹೆಚ್ಚು ಹಾಗೂ 20 ಹೆಚ್ಪಿವರೆಗಿನ ವಿದ್ಯುತ್ ಮಗ್ಗಗಳ 500 ಯುನಿಟ್‌ವರೆಗಿನ ವಿದ್ಯುತ್ ಬಳಕೆಗೆ ಪ್ರತಿ ಯುನಿಟ್‌ಗೆ 1.25 ರೂ. ರಿಯಾಯಿತಿ ನೀಡಲಾಗುವುದು" ಎಂದರು.
"ಜವಳಿ ಘಟಕಗಳ ಸ್ಥಾಪನೆಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರಿಗೆ ಘಟಕ ಯೋಜನಾ ವೆಚ್ಚದ ಮೇಲೆ ಶೇ.75 ರಷ್ಟು ಅಥವಾ ಗರಿಷ್ಠ ಬಂಡವಾಳ ಸಹಾಯಧನ ರೂ.2 ಕೋಟಿವರೆಗೆ ನೀಡಲಾಗುತ್ತಿದೆ. ನೂತನ ಜವಳಿ ನೀತಿ ಅನ್ವಯ ಗರಿಷ್ಠ ರೂ.75 ಲಕ್ಷಗಳ ಅವಧಿ ಸಾಲದ ಮೇಲೆ ಮೊದಲ 5 ವರ್ಷಗಳ ಅವಧಿಗೆ ಬಡ್ಡಿ ಸಹಾಯಧನ ಒದಗಿಸಲಾಗುತ್ತಿದೆ. ಸಾಮಾನ್ಯ ವರ್ಗದವರಿಗೆ ರೂ.1 ಕೋಟಿ ಸಹಾಯಧನ ಹಾಗೂ ಅತಿ ಸಣ್ಣ ಜವಳಿ ಘಟಕಗಳಿಗೆ ಶೇ.50 ರಷ್ಟು ಅಥವಾ ಗರಿಷ್ಠ ರೂ.50 ಲಕ್ಷದ ವರೆಗೆ ಸಹಾಯಧನ ನೀಡಲಾಗುವುದು. ಪರಿಷ್ಕೃತ ಜವಳಿ ನೀತಿಯ ಅನುಸಾರ ಜವಳಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿ, 10,000 ಕೋಟಿ ರೂ. ಬಂಡವಾಳ ಆಕರ್ಷಣೆ ಮಾಡಿ 5 ಲಕ್ಷ ಹೊಸ ಉದ್ಯೋಗಗಳನ್ನು ಸೃಜಿಸುವ ಗುರಿ ಹೊಂದಲಾಗಿದೆ" ಎಂದು ಹೇಳಿದರು.
"2024ರಲ್ಲಿ ನೂತನ ಜವಳಿ ನೀತಿ ರಚನೆಯಾಗಲಿದ್ದು, ನೇಕಾರರಿಗೆ ಹೊಸ ಯೋಜನೆಗಳನ್ನು ರೂಪಿಸಲಾಗುವುದು. ಬೆಂಗಳೂರಿನಲ್ಲಿನ ಗಾರ್ಮೆಂಟ್ಸ್ ಸಾಂದ್ರತೆಯನ್ನು ಕಡಿಮೆ ಮಾಡಲು ಸರ್ಕಾರ ಚಿಂತೆನೆ ನಡೆಸಿದೆ. ರಾಜ್ಯದ ಬೇರೆ ಕಡೆಗಳಲ್ಲೂ ಗಾರ್ಮೆಟ್ಸ್ ಕ್ಲಸ್ಟರ್ ಆರಂಭಿಸುವುದಾಗಿ" ತಿಳಿಸಿದರು.
ಇದನ್ನೂ ಓದಿ: ಮಧ್ಯಮಾವಧಿ, ದೀರ್ಘಾವಧಿ ಸಾಲದ ಅಸಲು ಕಟ್ಟಿದರೆ ಸಂಪೂರ್ಣ ಬಡ್ಡಿ ಮನ್ನಾ: ಸಿಎಂ ಸಿದ್ದರಾಮಯ್ಯ
ಉಡುಪಿ ನಗರಕ್ಕೆ ಏಪ್ರಿಲ್ ವೇಳೆಗೆ ಶಾಶ್ವತ ಕುಡಿಯುವ ನೀರು-ಬೈರತಿ ಸುರೇಶ್: ಮತ್ತೊಂದೆಡೆ, ಉಡುಪಿ ನಗರಕ್ಕೆ ವರಾಹಿ ನದಿಯಿಂದ ಶಾಶ್ವತ ಕುಡಿಯುವ ನೀರು ಒದಗಿಸುವ ಯೋಜನೆ ಮಾರ್ಚ್ ಅಥವಾ ಏಪ್ರಿಲ್ ವೇಳೆ ಪೂರ್ಣಗೊಳ್ಳಲಿದೆ. ಯೋಜನೆಯಿಂದ 40 ಎಂಎಲ್ಡಿ ನೀರು ಉಡುಪಿ ನಗರಕ್ಕೆ ಲಭಿಸುತ್ತದೆ ಎಂದು ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಬೈರತಿ ಸುರೇಶ್ ವಿಧಾನಸಭೆಯಲ್ಲಿ ತಿಳಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಶಾಸಕ ಯಶ್‌ಪಾಲ್ ಎ.ಸುವರ್ಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಯುಐಡಿಎಫ್ಸಿ ವತಿಯಿಂದ 160 ಕೋಟಿ ರೂ. ವೆಚ್ಚದಲ್ಲಿ ವರಾಹಿ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ವರಾಹಿ ನದಿ ಮೂಲದಿಂದ ಉಡುಪಿ ನಗರಕ್ಕೆ ನೀರು ಸರಬರಾಜು ಮಾಡಲು ಕ್ವಿಮಿಪ್ ಯೋಜನೆಯಲ್ಲಿ ಹಾಲಾಡಿ ಬಳಿ 45 ಎಂಎಲ್ಡಿ ನೀರು ಶುದ್ಧೀಕರಣ ಘಟಕವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.