ಬೆಳಗಾವಿ: ''ಪಕ್ಷ ಭೇದ ಮರೆತು ಕೆಲಸ ಮಾಡಿದಾಗ ಮಾತ್ರ ಬೆಂಗಳೂರಿಗೆ ಸಮಾನಾಂತರವಾಗಿ ಬೆಳಗಾವಿ ಜಿಲ್ಲೆಯೂ ಬೆಳೆಯಲು ಸಾಧ್ಯವಾಗುತ್ತದೆ'' ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ನಗರದ ಮಚ್ಛೆ ವಿದ್ಯುತ್ ವಿತರಣಾ ಕೇಂದ್ರದ ಆವರಣದಲ್ಲಿ ಇಂದು (ಮಂಗಳವಾರ) 260 ಕೋಟಿ ರೂಪಾಯಿ ವೆಚ್ಚದ 220 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ಹಾಗೂ ಬಹುವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
''ಬೆಳಗಾವಿ ನಗರ ರಾಜ್ಯದಲ್ಲಿ ಶರವೇಗದಲ್ಲಿ ಅಭಿವೃದ್ಧಿಯಾಗುತ್ತಿದೆ. ಉದ್ಯಮ, ವಸತಿ ಸೇರಿದಂತೆ ಎಲ್ಲ ರೀತಿಯಿಂದಲೂ ಅಭಿವೃದ್ಧಿಯಾಗುತ್ತಿದೆ. ಇದಕ್ಕೆ ಪೂರಕವಾಗಿ ನೀರು, ವಿದ್ಯುತ್ ಸೇರಿದಂತೆ ಸಕಲ ರೀತಿಯ ಮೂಲಸೌಕರ್ಯ ಒದಗಿಸಲು ಸರಕಾರ ಬದ್ಧವಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಅನೇಕ ಕೆಲಸಗಳಾಗಬೇಕಿದೆ'' ಎಂದು ಹೇಳಿದರು.
''ಈ ಭಾಗದ ಕೈಗಾರಿಕೋದ್ಯಮಿಗಳ ಬಹುದಿನಗಳ ಬೇಡಿಕೆಯ ಪ್ರಕಾರ 220 ಕೆ.ವಿ. ಹೊಸ ವಿದ್ಯುತ್ ಕೇಂದ್ರದ ನಿರ್ಮಾಣ ಮಾಡಲಾಗುತ್ತಿದೆ. ಉದ್ಯಮಗಳಿಗೆ ಗುಣಮಟ್ಟದ ಹಾಗೂ ನಿರಂತರ ವಿದ್ಯುತ್ ಪೂರೈಕೆ ಅಗತ್ಯವಿದ್ದು, ಈ ಕೇಂದ್ರದಿಂದ ಅನುಕೂಲವಾಗಲಿದೆ. ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಿ ಕೈಗಾರಿಕೆಗಳಿಗೆ ವಿದ್ಯುತ್ ಪೂರೈಸಬೇಕು. ಸದ್ಯಕ್ಕಿರುವ ಜಾಗದಲ್ಲಿ 220 ಕೆ.ವಿ. ಕೇಂದ್ರ ನಿರ್ಮಾಣ ಮಾಡಲಾಗುತ್ತಿದೆ. 39 ಕಿ.ಮೀ. ಉದ್ದದ ಬಹುವಿದ್ಯುತ್ ಪ್ರಸರಣ ಮಾರ್ಗ ನಿರ್ಮಿಸಲು ಉದ್ಧೇಶಿಸಲಾಗಿದೆ. 250 ಕೋಟಿ ರೂ. ವೆಚ್ಚದ ಯೋಜನೆ ಇದು. ಈ ಭಾಗದ ಕೈಗಾರಿಕೆಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಸಲು ಅನುಕೂಲವಾಗಲಿದೆ'' ಎಂದು ಸಚಿವರು ತಿಳಿಸಿದರು.
ನನಗೆ ಆಹ್ವಾನ ನೀಡಿಲ್ಲ- ಬಿಜೆಪಿ ಶಾಸಕ ಅಭಯ್ ಪಾಟೀಲ್: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅಭಯ್ ಪಾಟೀಲ, ವೇದಿಕೆ ಮೇಲೆಯೇ ತಮ್ಮ ಅಸಮಾಧಾನ ಹೊರಹಾಕಿದರು. ''ನಾನು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕು. ಆದರೆ, ನನಗೆ ಅಧಿಕಾರಿಗಳು ಯಾವುದೇ ರೀತಿಯ ಅಧಿಕೃತ ಆಹ್ವಾನ ಕೊಟ್ಟಿಲ್ಲ. ಈ ಕೆಲಸ ಮಾಡಿದ್ದು ನಾವು. ಆದರೆ, ಅಧಿಕಾರಿಗಳು ಈ ರೀತಿ ಸಣ್ಣ ಮನಸ್ಸು ತೋರಬಾರದು. ಗುತ್ತಿಗೆದಾರರು ಕರೆದಿದ್ದಕ್ಕೆ ನಾನು ಬಂದಿದ್ದೇನೆ'' ಎಂದು ಹರಿಹಾಯ್ದರು.
"ಈ ಯೋಜನೆಗಾಗಿ ಎರಡು ಬಾರಿ ಇಂಧನ ಸಚಿವ ಸುನೀಲ್ ಕುಮಾರ್ ಅವರಲ್ಲಿಗೆ ಜಿಲ್ಲೆಯ ಉದ್ಯಮಿಗಳ ನಿಯೋಗ ತೆಗೆದುಕೊಂಡು ಹೋಗಿದ್ದೆ. ಹಾಗಾಗಿ ಇಂಧನ ಸಚಿವರಿಂದಲೇ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಬೇಕು ಎಂದುಕೊಂಡಿದ್ದೆ. ಆದರೆ, ನೀತಿಸಂಹಿತೆ ಜಾರಿಯಿಂದ ಸಾಧ್ಯವಾಗಿರಲಿಲ್ಲ. ಈಗ ಗುತ್ತಿಗೆದಾರರು ಕರೆದಿದ್ದಕ್ಕೆ ಬಂದಿದ್ದೇನೆ. ನಾನು ಬರದೇ ಇದ್ದರೆ, ತಪ್ಪು ಸಂದೇಶ ಹೋಗುತ್ತದೆ ಎಂದು ಕಾರ್ಯಕ್ರಮಕ್ಕೆ ಬಂದಿದ್ದೇನೆ. ಅಧಿಕೃತವಾಗಿ ಕಾರ್ಯಕ್ರಮಕ್ಕೆ ನನಗೆ ಅಧಿಕಾರಿಗಳು ಅಹ್ವಾನ ನೀಡಿಲ್ಲ. ಈ ಬಗ್ಗೆ ಹಕ್ಕುಚ್ಯುತಿ ಮಂಡಿಸುತ್ತೇನೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಆಸೀಫ್ (ರಾಜು) ಸೇಠ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹಾಗೂ ಹೆಸ್ಕಾಂ ಹಿರಿಯ ಅಧಿಕಾರಿಗಳು ಇದ್ದರು.
ಅದು ಅಧಿಕಾರಿಗಳ ಕೆಲಸ- ಸತೀಶ ಜಾರಕಿಹೊಳಿ: ಅಭಯ ಪಾಟೀಲರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೇ ಇರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ ಜಾರಕಿಹೊಳಿ, ''ಕಾರ್ಯಕ್ರಮಕ್ಕೆ ಶಾಸಕರನ್ನು ಕರೆಯುವುದು ಅಧಿಕಾರಿಗಳ ಕರ್ತವ್ಯ. ನಾನು ಕೂಡ ಅಧಿಕಾರಿಗಳ ಆಹ್ವಾನದ ಮೇರೆಗೆ ಇಲ್ಲಿಗೆ ಬಂದಿದ್ದೇನೆ'' ಎಂದರು.
ಜಿಲ್ಲೆಯ ರಾಜಕಾರಣದಲ್ಲಿ ಸತೀಶ ಜಾರಕಿಹೊಳಿ ಮತ್ತು ಅಭಯ ಪಾಟೀಲ ಬದ್ಧವೈರಿಗಳು ಎಂದೇ ಬಿಂಬಿತವಾಗಿದ್ದಾರೆ. ಹಾಗಾಗಿ ಒಂದೇ ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತುಕೊಂಡರೂ ಸತೀಶ ಜಾರಕಿಹೊಳಿ ಮತ್ತು ಅಭಯ ಪಾಟೀಲ ಪರಸ್ಪರ ಮಾತನಾಡಲಿಲ್ಲ. ಮುಖವನ್ನೂ ನೋಡಲಿಲ್ಲ. ಭಾಷಣ ಮಾಡುವಾಗ ಇಬ್ಬರು ನಾಯಕರು ಹೆಸರು ತೆಗೆದುಕೊಂಡಿದ್ದು ಬಿಟ್ಟರೆ, ಯಾವುದೇ ಮಾತುಕತೆ ನಡೆಯಲಿಲ್ಲ.
ಇದನ್ನೂ ಓದಿ: ಗುತ್ತಿಗೆದಾರರಿಗೆ ನಿಯಮ ಪ್ರಕಾರ ಬಿಲ್ ಪಾವತಿ ಆಗುತ್ತೆ, ಬ್ಲ್ಯಾಕ್ ಮೇಲ್ಗೆ ಹೆದರಲ್ಲ: ಡಿಸಿಎಂ ಡಿ ಕೆ ಶಿವಕುಮಾರ್