ಬೆಳಗಾವಿ/ಪುಣೆ: ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಕಾರ್ಯಕರ್ತರು ಮಹಾರಾಷ್ಟ್ರದ ಪುಣೆಯಲ್ಲಿ ಕರ್ನಾಟಕದ ಬಸ್ಸಿಗೆ ಮಸಿ ಬಳಿದಿದ್ದಾರೆ. ಇದು ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಉದ್ವಿಗ್ನ ವಾತಾವರಣ ಉಂಟು ಮಾಡಿದೆ. ಪೊಲೀಸರ ಸೂಚನೆಯ ಮೇರೆಗೆ ಬೆಳಗಾವಿ ಗಡಿ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ಹೋಗುವ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಬೆಳಗಾವಿಯಲ್ಲಿ ಉದ್ವಿಗ್ನತೆ ಸೃಷ್ಟಿಸುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಎಂಇಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹಾಗೆಯೇ ನಾಡದ್ರೋಹಿ ಘೋಷಣೆಗಳನ್ನೂ ಕೂಗಿದ್ದಾರೆ. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಬಂದಿದ್ದಾಗ ಬೆಳಗಾವಿ, ಕಾರವಾರ, ನಿಪ್ಪಾಣಿ, ಬಾಲ್ಕಿ ಸಂಯುಕ್ತ ಮಹಾರಾಷ್ಟ್ರ ಭಾಗ ಎಂದೆಲ್ಲಾ ಘೋಷಣೆಗಳನ್ನು ಮೊಳಗಿಸಿದ್ದಾರೆ. ಪ್ರತಿಭಟನಾನಿರತ ಎಂಇಎಸ್ ಕಾರ್ಯಕರ್ತರನ್ನು ಮಾರ್ಕೆಟ್ ಠಾಣೆ ಪೊಲೀಸರು ವಶಕ್ಕೆ ಪಡೆದರು.
ಮಹಾರಾಷ್ಟ್ರ ಸಚಿವರು ಬೆಳಗಾವಿ ನಗರಕ್ಕೆ ಬರುವುದು ರದ್ದಾಗುತ್ತಿದ್ದಂತೆ ಇತ್ತ ಕುಂದಾನಗರಿಗೆ ಕೊಲ್ಲಾಪುರ ಶಿವಸೇನೆ ಅಧ್ಯಕ್ಷ ವಿಜಯ್ ದೇವಣೆ ಆಗಮನದ ಹಿನ್ನೆಲೆಯಲ್ಲಿ ಕರ್ನಾಟಕ ಮಹಾರಾಷ್ಟ್ರ ಗಡಿಯಾದ ಕುಗುನೊಳ್ಳಿ ಗಡಿಗೆ ಮಹಾರಾಷ್ಟ್ರದ ನೂರಕ್ಕೂ ಹೆಚ್ಚು ಪೊಲೀಸರು ಆಗಮಿಸಿದ್ದಾರೆ. ನಿಪ್ಪಾಣಿ ತಾಲೂಕಿನ ಕುಗುನೊಳ್ಳಿ ಉಭಯ ರಾಜ್ಯಗಳ ಗಡಿ ಹದ್ದಿನಲ್ಲಿ ಎರಡೂ ರಾಜ್ಯಗಳ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಕರ್ನಾಟಕ ಈಗಾಗಲೇ ಮುನ್ನೂರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಕರವೇ ಪ್ರತಿಭಟನೆ: 'ಮಹಾ' ಲಾರಿಗಳಿಗೆ ಕಲ್ಲು, ಹಲವರು ಪೊಲೀಸ್ ವಶಕ್ಕೆ