ಅಥಣಿ(ಬೆಳಗಾವಿ): ಮಹಾರಾಷ್ಟ್ರ ರಾಜ್ಯದಲ್ಲಿ ಕೆಲವು ಕಿಡಿಗೇಡಿಗಳು ಕರ್ನಾಟಕದ ಬಸ್ಸಿನ ಮೇಲೆ ಕಪ್ಪು ಮಸಿ ಬಳಿದು, ಮತ್ತೊಂದೆಡೆ ಕಲ್ಲು ತೋರಾಟ ನಡೆಸಿದ ಬೆನ್ನಲ್ಲೇ ಮಹಾರಾಷ್ಟ್ರ ಕರ್ನಾಟಕ ಗಡಿ ಪ್ರದೇಶ ಕಾಗವಾಡದಲ್ಲಿ ಬೆಳಗಾವಿ ಜಿಲ್ಲಾಡಳಿತ ಕಟ್ಟೆಚರ ವಹಿಸಿದೆ. ಕಾಗವಾಡ ಗಡಿಯಲ್ಲಿ ಒಂದು ಕೆಎಸ್‌ಆರ್‌ಪಿ ತುಕಡಿ ಹಾಗೂ ಡಿಆರ್ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಕರ್ನಾಟಕದಿಂದ ಮಹಾರಾಷ್ಟ್ರದ ಸಾಂಗ್ಲಿ, ಮೀರಜ್, ಪುಣೆ, ಸಂಪರ್ಕಿಸುವ ಸಾರಿಗೆ ವ್ಯವಸ್ಥೆಯನ್ನು ಕೆಎಸ್ಆರ್ಟಿಸಿ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ದಿನನಿತ್ಯ ರಾಜ್ಯದ ವಿವಿಧ ಮೂಲೆಗಳಿಂದ ಕಾಗವಾಡ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ದಿನನಿತ್ಯ ನೂರಕ್ಕೂ ಹೆಚ್ಚು ಬಸ್ಗಳು ಸಾರಿಗೆ ಸಂಪರ್ಕವನ್ನು ಕಲ್ಪಿಸುತ್ತಿದ್ದವು. ಆದರೆ ಸದ್ಯ ಕಾಗವಾಡ ಗಡಿವರೆಗೆ ಬಸ್ ಸೇವೆ ನೀಡಲಾಗಿದ್ದು, ಹಲವಾರು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.
ಕಾಗವಾಡದಿಂದ ಪ್ರಯಾಣಿಕರು ಸರಿ ಸುಮಾರು ಎರಡು ಕಿಲೋಮೀಟರ್ ನಡೆದುಕೊಂಡು ಮಹಾರಾಷ್ಟ್ರದ ಗಡಿ ಪ್ರವೇಶಿಸಿ ಅಲ್ಲಿಂದ ಸಾರಿಗೆ ಸಂಪರ್ಕ ಪಡೆದುಕೊಂಡು ಪ್ರಯಾಣ ಮಾಡುವಂತಾಗಿದೆ. ಮಹಾರಾಷ್ಟ್ರ ಕರ್ನಾಟಕ ಗಡಿ ವಿವಾದ ಕರ್ನಾಟಕ ಸಾರಿಗೆ ಇಲಾಖೆ ಮೇಲೆ ಭಾರಿ ಹೊಡೆತ ನೀಡಿದ್ದು, ದಿನನಿತ್ಯ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಮಹಾ ಕನ್ನಡಿಗರಿಂದ ಮಹಾರಾಷ್ಟ್ರ ಸರ್ಕಾರಕ್ಕೆ ಮುಖಭಂಗ: ಮಹಾರಾಷ್ಟ್ರ ರಾಜ್ಯದ ಜತ್ ತಾಲೂಕಿನಲ್ಲಿ ವಾಸಿಸುವ ಕನ್ನಡಿಗರು ಕರ್ನಾಟಕ ಸೇರಲು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈ ಮೇಲ್ ಮುಖಾಂತರ ಅಭಿಯಾನ ಪ್ರಾರಂಭ ಮಾಡಿದ್ದಾರೆ. ಜತ್ ತಾಲೂಕಿನ 40 ಹಳ್ಳಿಗಳನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಿ, ನಾವೂ ಸೇರಲು ಸಿದ್ಧರಿದ್ದೇವೆ. ನಮಗೆ ಮಹಾರಾಷ್ಟ್ರ ಸರ್ಕಾರ ಮೂಲಭೂತ ಸೌಕರ್ಯ ನೀಡುತ್ತಿಲ್ಲ ಎಂದು ಕರುನಾಡು ಸೇರಲು ಅಭಿಯಾನ ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದಿಂದ ಬೆಳಗಾವಿಗೆ ಬರುತ್ತಿದ್ದ 300ಕ್ಕೂ ಹೆಚ್ಚು ಬಸ್ಗಳು ತಾತ್ಕಾಲಿಕ ಸ್ಥಗಿತ!