ಬೆಳಗಾವಿ: ಮಹದಾಯಿ ಹೋರಾಟ ಮುಂದುವರೆಸುತ್ತೇವೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ಹೋರಾಟ ಮಾಡುವವರು ಮಾಡಿಕೊಳ್ಳಲಿ ಯಾರು ಬೇಡ ಅಂದವರು ಎಂದು ಡಿಸಿಎಂ ಗೋವಿಂದ ಕಾರಜೋಳ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿವಿವಾದ ಕುರಿತು ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಸಿಎಂಗೆ ಡಿಸಿಎಂ ತಿರುಗೇಟು ನೀಡಿದ್ದಾರೆ. ಈ ಭೂಮಿ ಮೇಲೆ ಜನ ಇರುವವರೆಗೆ ಬೆಳಗಾವಿ, ಸುತ್ತಮುತ್ತಲಿನ ಪ್ರದೇಶ ಕರ್ನಾಟಕದಲ್ಲಿ ಇರುತ್ತದೆ. ಉಪಚುನಾವಣೆಯಲ್ಲಿ ನಾವು 12 ಸ್ಥಾನ ಗೆದ್ದಿದ್ದು, ನೂತನ ಶಾಸಕರೆಲ್ಲರೂ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಆಗುತ್ತದೆ, ಸ್ವಲ್ಪ ಕಾಯಬೇಕಷ್ಟೇ ಎಂದು ತಿಳಿಸಿದರು.
ರೇಣುಕಾಚಾರ್ಯಗೆ ಡಿಸಿಎಂ ತಿರುಗೇಟು: ನಮ್ಮದು ರಾಷ್ಟ್ರೀಯ ಪಕ್ಷ. ದೇಶದಲ್ಲಿ ಆಡಳಿತ ನಡೆಸುತ್ತಿದೆ. ಪಕ್ಷದ ಯಾವುದೇ ಚಟುವಟಿಕೆ, ತೀರ್ಮಾನ ರಾಷ್ಟ್ರಮಟ್ಟದಲ್ಲಿ ಆಗುತ್ತವೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷರು, ಸಿಎಂ ಯಡಿಯೂರಪ್ಪ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಡಿಸಿಎಂ ಹುದ್ದೆಯ ಬಗ್ಗೆ ನಮ್ಮ ನಾಯಕರು ಹೇಳಿದ್ರೆ ನಾನು ಪ್ರತಿಕ್ರಿಯೆ ನೀಡುತ್ತೇನೆ. ಹಾದಿ-ಬೀದಿಯಲ್ಲಿ ಡಿಸಿಎಂ ಹುದ್ದೆ ಬಗ್ಗೆ ಹೇಳಿಕೆ ನೀಡುವವರಿಗೆ ನಾನೇಕೆ ಪ್ರತಿಕ್ರಿಯೆ ನೀಡಲಿ. ಡಿಸಿಎಂ ಹುದ್ದೆ ವಿಚಾರವಾಗಿ ಹೇಳಿಕೆ ನೀಡಿದ್ದ ಶಾಸಕ ರೇಣಾಕಾಚಾರ್ಯಗೆ ಡಿಸಿಎಂ ತಿರುಗೇಟು ನೀಡಿದರು.
ಅಮಾಯಕರನ್ನು ಗೋಲಿಬಾರ್ ಮಾಡಿ ನಾವು ಸಾಯಿಸಿಲ್ಲ. ಯಾರು ದೇಶ ದ್ರೋಹ, ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿದ್ದಾರೆ ಅಂತಹವರನ್ನು ಪೊಲೀಸರು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದರು.