ಬೆಳಗಾವಿ: ಇದೇ 27ರಂದು ಬೆಳಗಾವಿ ನಗರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುತ್ತಿದ್ದಾರೆ. ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ಕೂಡ ನೀಡಲಿದ್ದಾರೆ. ಜೊತೆಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿಯಿಂದ ಕರ್ನಾಟಕದಿಂದ ದೇಶದ ರೈತರಿಗೆ ಹಣ ಬಿಡುಗಡೆ ಮಾಡಲಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ಬೆಳಗಾವಿ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮದ ರೂಪುರೇಷೆ ಪೂರ್ವಸಿದ್ಧತೆ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಿ ಮಾಧ್ಯಮಗಳ ಜೊತೆ ಮಾತನಾಡಿದರು. ಆರು ತಿಂಗಳ ಹಿಂದೆ ದೆಹಲಿಯ ಒಂದು ಹಳ್ಳಿಯಿಂದ ಕಿಸಾನ್ ಸಮ್ಮಾನ್ ಯೋಜನೆಯ ಮುಖಾಂತರ ರೈತರ ಖಾತೆಗೆ 22 ಸಾವಿರ ಕೋಟಿ ರೂಪಾಯಿ ಸಂಧಾನ ಮಾಡಲಾಗಿತ್ತು. ಈ ಬಾರಿ 14 ಕೋಟಿ ರೈತರ ಖಾತೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಎರಡು ಸಾವಿರದಂತೆ ಪ್ರತಿ ವರ್ಷ 6000 ರೂ.ರಂತೆ 2,70,000 ಕೋಟಿ ರೂಪಾಯಿ ದೇಶದ ರೈತರ ಖಾತೆಗೆ ಜಮಾ ಮಾಡಲಾಗುವುದು. ಪ್ರತಿ ವರ್ಷ ಆರು ತಿಂಗಳಿಗೊಮ್ಮೆ ಈ ಹಣವನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಮಾಜಿ ಸಿಎಂ ಯಡಿಯೂರಪ್ಪನವರ ಹುಟ್ಟುಹಬ್ಬದ ದಿನದಂದು ಕರ್ನಾಟಕದಿಂದ ದೇಶದ ರೈತರ ಖಾತೆಗೆ ಪ್ರಧಾನಿ ನರೇಂದ್ರ ಮೋದಿಯವರು ಕಿಸಾನ್ ಸಮ್ಮಾನ್ ನಿಧಿಯಿಂದ ರೈತರ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಿದ್ದಾರೆ. ಮುಂಜಾನೆ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಧ್ಯಾಹ್ನ ಬೆಳಗಾವಿಗೆ ಪ್ರಧಾನಿ ಆಗಮಿಸಲಿದ್ದಾರೆ. ಬೆಳಗಾವಿಯಲ್ಲಿ ಬೃಹತ್ತಾದ ರೋಡ್ ಶೋ ಮಾಡಲು ನಿರ್ಧರಸಿಲಾಗಿದೆ. ಆದರೆ ಪ್ರಧಾನಿ ಅವರ ಭದ್ರತೆಯ ಪಡೆ ಸೂಚಿಸಿದ ರೀತಿ ರೋಡ್ ಶೋ ಮಾಡಲಾಗುವುದು. ಯಾವ ಕಡೆ ರಸ್ತೆಯಿಂದ ರೋಡ್ ಶೋ ಮಾಡಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲವೆಂದು ಸಚಿವೆ ಶೋಭಾ ತಿಳಿಸಿದರು.
ಪ್ರಧಾನಿ ಮೋದಿ ಅವರ ಕೊಡುಗೆ ಶೂನ್ಯ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ: ಚುನಾವಣೆ ಬಂತು ಎಂದರೆ ಮಾಜಿ ಸಿಎಂ ಸಿದ್ದರಾಮಯ್ಯನವರು ಮಾತನಾಡುತ್ತಾರೆ. ತಮ್ಮ ಬೆನ್ನನ್ನು ಒಮ್ಮೆ ತಿರುಗಿ ನೋಡಿಕೊಳ್ಳಬೇಕು, ಒಬ್ಬರ ಕಡೆ ಒಂದು ಬೊಟ್ಟು ಮಾಡಿ ಮಾತನಾಡುವಾಗ ನಾಲ್ಕು ಬೊಟ್ಟು ನಮ್ಮನ್ನು ನೋಡುತ್ತಿರುತ್ತವೆ ಎಂಬ ಸಾಮಾನ್ಯ ಜ್ಞಾನ ಅವರಿಗೆ ಇರಬೇಕು. 10, 11 ಸಾರಿ ಬಜೆಟ್ ಮಂಡನೆ ಮಾಡಿದ್ದೇನೆ ಎಂದು ಹೇಳುತ್ತಾರೆ. ಆ ಬಜೆಟ್ಗಳಲ್ಲಿ ರೈತರಿಗೆ ಉತ್ತಮವಾದದ್ದನ್ನು ನೀಡಿದ್ದರೆ ಇವತ್ತು ಸಮಸ್ಯೆ ಇರುತ್ತಿರಲಿಲ್ಲ. ಆವತ್ತು ಪಲಾಯನ ಮಾಡಿ ಹೋಗಿದ್ದಾರೆ. ಕಾಂಗ್ರೆಸ್ ಧರ್ಮ ಜಾತಿ ಒಡೆದು ಆಳುವ ನೀತಿಯಿಂದಲೇ 2018 ರಲ್ಲಿ ಜನರು ಅವರನ್ನು ಮನೆಗೆ ಕಳುಹಿಸಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಕೇಂದ್ರ ಸಚಿವರು ಹರಿಹಾಯ್ದರು.
ಕೇಂದ್ರ ಸಚಿವರಿಗೆ ಸಾಥ್ ನೀಡಿದ ಬೆಳಗಾವಿ ಹಲವು ಜನಪ್ರತಿನಿಧಿಗಳು: ಫೆಬ್ರವರಿ 27 ರಂದು ಬೆಳಗಾವಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿಯಲ್ಲಿ ಬೃಹತ್ ಬಹಿರಂಗ ಸಮಾವೇಶ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಸಮಾವೇಶದ ಸ್ಥಳ ಪರಿಶೀಲನೆ ಮಾಡಿದರು. ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ್, ಶಾಸಕರಾದ ಅಭಯ ಪಾಟೀಲ್, ಅನಿಲ್ ಬೆನಕೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬಿಜೆಪಿ ಮುಖಂಡರು ಸಚಿವರಿಗೆ ಸಾಥ್ ನೀಡಿದರು.
ಇದನ್ನೂ ಓದಿ: ಫೆ.27ರಂದು ಬೆಳಗಾವಿಗೆ ಪ್ರಧಾನಿ ಮೋದಿ: ಕುಂದಾನಗರಿಯಲ್ಲಿ ಭರದ ಸಿದ್ಧತೆ