ಚಿಕ್ಕೋಡಿ: ಸಾರ್ವತ್ರಿಕ ಚುನಾವಣೆಯಲ್ಲಿ ಅಥಣಿ ಮತಕ್ಷೇತ್ರದಿಂದ ನಾನು ಅಥವಾ ಶಾಸಕ ಮಹೇಶ್ ಕುಮಠಳ್ಳಿ ಇಬ್ಬರಲ್ಲಿ ಒಬ್ಬರು ಸ್ಪರ್ಧೆ ಮಾಡುತ್ತೇವೆ ಎಂದು ವಿಧಾನಪರಿಷತ್ ಸದಸ್ಯ ಲಕ್ಷ್ಮಣ್ ಸವದಿ ಹೇಳಿಕೆ ನೀಡಿದ್ದಾರೆ. ಅವರು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಗರೋತ್ಥಾನ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿ, ಇಬ್ಬರಲ್ಲಿ ಒಬ್ಬರು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇವೆ. ಮತದಾರರ ಪ್ರಭುಗಳು ನಮ್ಮ ಪಕ್ಷದ ಮೇಲೆ ಸಂಪೂರ್ಣ ಆಶೀರ್ವಾದ ಮಾಡಬೇಕೆಂದು ಕೋರಿದರು. ಜೊತೆಗೆ ಈಗಾಗಲೇ ಮಹೇಶ್ ಕುಮಠಳ್ಳಿ ಹೇಳಿದ ರೀತಿಯಲ್ಲಿ ಅಥಣಿ ಮತ ಕ್ಷೇತ್ರಕ್ಕೆ ಒಂದು ಎಂಎಲ್ಸಿ, ಒಂದು ಶಾಸಕ ಸ್ಥಾನ ಖಾಯಂ. ನಾನು ಇದಕ್ಕೆ ಧ್ವನಿಗೂಡಿಸುತ್ತೇನೆ ಶಾಸಕ ಕುಮಠಳ್ಳಿ ಮುಂದೆಯೇ ಹೇಳಿದರು.
ಅಥಣಿ ಬಿಜೆಪಿ ಟಿಕೆಟ್ ಗೊಂದಲ: ಕಳೆದ 2018ರಲ್ಲಿ ಕೆಲವು ರಾಜಕೀಯ ಬದಲಾವಣೆಯಿಂದ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷಕ್ಕೆ ಬಂದಿರುವ ಮಹೇಶ್ ಕುಮಠಳ್ಳಿ ಬಿಜೆಪಿ ಪಕ್ಷದಲ್ಲಿ ಶಾಸಕರಾಗಿ ಆಯ್ಕೆಯಾದರು. ಕ್ಷೇತ್ರ ಬಿಟ್ಟು ಕೊಟ್ಟ ಲಕ್ಷ್ಮಣ್ ಸವದಿ ಅವರನ್ನು ಬಿಜೆಪಿ ವರಿಷ್ಠರು ಡಿಸಿಎಂ ಸ್ಥಾನವನ್ನು ನೀಡಿದರು. ಆದರೆ ಕಳೆದ 20 ವರ್ಷದಿಂದ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ ಸವದಿ ಅವರಿಗೆ ಮತ್ತೆ ಅಥಣಿ ಬಿಜೆಪಿ ಟಿಕೆಟ್ ನೀಡುವಂತೆ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಶಾಸಕ ಮಹೇಶ್ ಕುಮಠಳ್ಳಿ ಅವರಿಗೆ ಬಿಜೆಪಿ ಬಿ ಫಾರಂ ಕೊಡುವಂತೆ ಕಾರ್ಯಕರ್ತರಲ್ಲಿ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ವಾಗ್ಯುದ್ಧ ನಡೆಯುತ್ತಿರುತ್ತದೆ.
ಬೆಳಗಾವಿಗೆ ಅಮಿತ್ ಶಾ ಬಂದು ಹೋದ ಮೇಲೆ ಇಬ್ಬರು ನಾಯಕರಿಂದ ಒಗ್ಗಟ್ಟಿನ ಮಂತ್ರ: ಬೆಳಗಾವಿ ಬಿಜೆಪಿಯಲ್ಲಿ ಯಾವುದು ಸರಿ ಇಲ್ಲ ಎಂಬುದು ಈಗಾಗಲೇ ಮನೆ ಮಾತಾಗಿದ್ದು, ಬೆಳಗಾವಿ ನಾಯಕರ ಭಿನ್ನಮತ ಶಮನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಳಗಾವಿ ನಗರಕ್ಕೆ ಆಗಮಿಸಿ, ಜಿಲ್ಲೆಯ ಬಿಜೆಪಿ ನಾಯಕರ ಸಭೆ ಮೇಲೆ ಸಭೆ ನಡೆಸಿದ್ದರು. ಈ ವೇಳೆ ನಾಯಕರ ಕುಂದುಕೊರತೆಗಳನ್ನು ಕೇಳಿ, ಖಡಕ್ ಎಚ್ಚರಿಕೆ ನೀಡಿದರು ಎಂದು ಮಾತುಗಳೂ ಕೇಳಿ ಬರುತ್ತಿದ್ದವು. ಅಮಿತ್ ಶಾ ಬಂದು ಹೋದ ಮೇಲೆ ಅಥಣಿ ಕ್ಷೇತ್ರದಲ್ಲಿ ವಿಧಾನಪರಿಷತ್ ಸದಸ್ಯ ಲಕ್ಷ್ಮಣ್ ಸವದಿ ಹಾಗೂ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಜೊತೆಯಾಗಿ ಅಥಣಿ ಪಟ್ಟಣದಲ್ಲಿ ವಿವಿಧ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಹಿಂದೆ ರಾಜ್ಯ ಸಚಿವರು ಅಥಣಿ ಮತಕ್ಷೇತ್ರಕ್ಕೆ ಆಗಮಿಸಿ ಕೋಟ್ಯಂತರ ರೂಪಾಯಿ ಅನುದಾನದಲ್ಲಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ಸಂದರ್ಭದಲ್ಲಿ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಸರ್ಕಾರಿ ಕಾರ್ಯಕ್ರಮಗಳಿಗೆ ಗೈರಾಗಿದ್ದರು. ಆದರೆ ಇವತ್ತು ಅಥಣಿ ಪಟ್ಟಣದಲ್ಲಿ ಇಬ್ಬರು ನಾಯಕರು ಜೊತೆ ಜೊತೆಯಾಗಿ ಸಂಚಾರ ಬೆಳೆಸಿ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಈ ವಿಚಾರಕ್ಕೆ ಲಕ್ಷ್ಮಣ್ ಸವದಿ ಮಾತನಾಡಿ, ನಮ್ಮ ಇಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನೀವು ಆ ರೀತಿ ತಿಳಿದುಕೊಂಡಿದ್ದಿರಿ. ಆ ರೀತಿ ತಿಳಿಯಬೇಡಿ ಎಂದು ಮಾಧ್ಯಮಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದರು. ಹಿಂದೆ ನನ್ನ ಗಮನಕ್ಕೆ ತಂದು ಶಾಸಕರು ಹಲವು ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಅವರ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಲಿಲ್ಲ. ಇಬ್ಬರು ಕೆಲಸದ ಹಿನ್ನೆಲೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗ್ಲಿಲ್ಲ, ಇದಕ್ಕೆ ವಿಶೇಷ ಅರ್ಥ ಅಗತ್ಯವಿಲ್ಲ ಎಂದು ಹೇಳಿದರು. ನಾವು ಇಬ್ಬರೂ ನಾಯಕರು ಒಗ್ಗಟ್ಟಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಬಂಜೆಯಾಗಿದೆ: ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಹಗಲು ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಬಂಜೆಯಾಗಿದೆ. ಮಕ್ಕಳು ಹುಟ್ಟುವ ಪ್ರಶ್ನೆಯಿಲ್ಲ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಸವದಿ ಲೇವಡಿ ಮಾಡಿದರು. ರಾಜ್ಯದಲ್ಲಿ ಕೇವಲ 50 ದಿನದಲ್ಲಿ ಬಿಜೆಪಿ ಸರ್ಕಾರ ಉರುಳುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದರು. ಈ ವಿಚಾರದಲ್ಲಿ ಸವದಿ ಅಥಣಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಮತ್ತೆ ಅಧಿಕಾರಕ್ಕೆ ಬರಲು ಕಾಂಗ್ರೆಸ್ ನವರು ಹಗಲು ಕನಸು ಕಾಣುತ್ತಿದ್ದಾರೆ ಡಿಕೆ ಶಿವಕುಮಾರ್ ಅವರಿಗೆ ಲಕ್ಷ್ಮಣ್ ಸವದಿ ತಿರುಗೇಟು ನೀಡಿದರು.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ವಿಚಾರ: ಈಗಾಗಲೇ ಈ ಕುರಿತು ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಮತ್ತು ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಆ ಎರಡು ಹೇಳಿಕೆಗಳನ್ನು ನೀವು ಗಮನಿಸಿರಬಹುದು. ರಮೇಶ್ ಜಾರಕಿಹೊಳಿ ಮತ್ತು ಡಿ ಕೆ ಶಿವಕುಮಾರ್ ವೈಯಕ್ತಿಕ ವಿವಾದದ ವಿಚಾರಗಳು ಬಿಜೆಪಿಗೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧಿಸಿಲ್ಲ. ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದೂ ಸರಿಯಲ್ಲ. ಸಿಬಿಐ ತನಿಖೆ ಬಗ್ಗೆ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಸವದಿ ಹೇಳಿದರು.
ಇದನ್ನೂ ಓದಿ : ಅಪ್ಪು ಪ್ರೇರಣೆ: ಚಿಕ್ಕೋಡಿಯಲ್ಲಿ 85 ವಿದ್ಯಾರ್ಥಿಗಳಿಂದ ನೇತ್ರದಾನ ವಾಗ್ದಾನ