ಚಿಕ್ಕೋಡಿ: ಬರುವ ವಿಧಾನಸಭೆ ಚುನಾವಣೆಯಲ್ಲಿ ತಂದೆ ಲಕ್ಷ್ಮಣ್ ಸವದಿ ಅವರು ಅಥಣಿ ಮತ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ. ಯಾವುದೇ ಕಾರಣಕ್ಕೂ ಮತ ಕ್ಷೇತ್ರ ಬಿಟ್ಟು ಕೊಡುವ ಪ್ರಶ್ನೆಯಿಲ್ಲ ಎಂದು ಚಿದಾನಂದ ಸವದಿ ಹೇಳಿದ್ದಾರೆ. ಅಥಣಿ ಪಟ್ಟಣ ಗಚ್ಚಿನ ಮಠದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಧ್ಯಮಗಳ ಮುಖಾಂತರ ಬಿಜೆಪಿ ವರಿಷ್ಠರಿಗೆ ನಾನು ಸಂದೇಶ ರವಾನಿಸಲು ಇಷ್ಟಪಡುತ್ತೇನೆ. ಯಾವುದೇ ಕಾರಣಕ್ಕೂ ಅಥಣಿ ಕ್ಷೇತ್ರ ಬಿಟ್ಟು ಕೊಡುವ ಮಾತೇ ಇಲ್ಲ. ಅಥಣಿ ಜನರ ಆಶೀರ್ವಾದ ನಮ್ಮ ಮೇಲಿರಲಿ ಎಂದು ಮನವಿ ಮಾಡಿದರು.
ಆದರೆ, ಸದ್ಯ ಕೆಲವು ರಾಜಕಾರಣಿಗಳು ಮಹಿಳೆಯರಿಗೆ ಅ ಗೌರವ ಸಲ್ಲಿಸಿ ನಾಯಿ, ನರಿ ಎಂದು ಅವರ ಮುಂದೆ ಸೆಡ್ಡು ಹೊಡೆಯುತ್ತಿದ್ದಾರೆ. ಇಂಥ ಪರಿಸ್ಥಿತಿಗೆ ಬಂದಿದ್ದೇವೆ ಎಂದು ಅವರು ಪರೋಕ್ಷವಾಗಿ ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಿಳೆಯರು: ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಒಂದೇ ದಿನಕ್ಕೆ ಸೀಮಿತವಾಗಬಾರದು, ವೀರರಾಣಿ ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಸಾವಿತ್ರಿಬಾಯಿ ಫುಲೆಯಂತ ಅನೇಕ ಮಹಿಳೆಯರಿಂದ ಸ್ವಾತಂತ್ರ, ದೇಶದಲ್ಲಿ ಸಾಕ್ಷರತೆ ಬಂದಿರುವುದು. ದೇಶಕ್ಕಾಗಿ ತ್ಯಾಗ ಮಾಡಿದ ಮಹಿಳೆಯನ್ನು ಸ್ಮರಣೆ ಮಾಡಬೇಕು ಎಂದು ಹೇಳಿದರು.
ಟಿಕೆಟ್ಗಾಗಿ ಅಸಮಾಧಾನ ಸ್ಪೋಟ:ತೆರೆ ಮರೆ ಹಿಂದೆ ಅಥಣಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ಗೆ ಲಕ್ಷ್ಮಣ್ ಸವದಿ ಹಾಗೂ ಮಹೇಶ್ ಕುಮಠಳ್ಳಿ ಇಬ್ಬರ ನಾಯಕರಲ್ಲಿ ಕಿತ್ತಾಟ ಶುರುವಾಗಿದೆ. ಇವತ್ತು ಅಸಮಾಧಾನ ಜ್ವಾಲಾಮುಖಿಯನ್ನು ಸವದಿ ಪುತ್ರ ಚಿದಾನಂದ ಸವದಿ ಸ್ಫೋಟ ಮಾಡಿದ್ದಾರೆ. ಆದರೆ, ಹಲವು ಬಾರಿ ಮಾಧ್ಯಮಗಳ ಎದುರು ಲಕ್ಷ್ಮಣ್ ಸವದಿ, ನಾನು ಟಿಕೆಟ್ ಆಕಾಂಕ್ಷಿ ಅಲ್ಲ. 2018ರಲ್ಲಿ ಸೋತರೂ ನಮಗೆ ಪಕ್ಷ ಉಪಮುಖ್ಯಮಂತ್ರಿ ಸ್ಥಾನ ನೀಡಿದೆ. ಇವತ್ತು ಚಿದಾನಂದ ಸವದಿ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಆಪ್ತಮಿತ್ರನ ಬೆನ್ನಿಗೆ ನಿಂತ ರಮೇಶ್ ಜಾರಕಿಹೊಳಿ: ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ರಮೇಶ ಜಾರಕಿಹೊಳಿ, ನನ್ನನ್ನು ನಂಬಿ ಬಂದಿರುವ ಮಹೇಶ್ ಕುಮಟಳ್ಳಿಗೆ ಯಾವುದೇ ದ್ರೋಹ ಆಗೋಕೆ ಬಿಡುವುದಿಲ್ಲ. ಅಥಣಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಅವರಿಗೆ ನೀಡಲಾಗುವುದು. ಒಂದು ವೇಳೆ ನೀಡದಿದ್ದರೆ ನಾನು ಕೂಡ ಗೋಕಾಕ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಆಪ್ತಮಿತ್ರನ ಬೆನ್ನಿಗೆ ನಿಂತು ರಮೇಶ್ ಜಾರಕಿಹೊಳಿ ಅವರು ಹೇಳಿಕೆ ನೀಡಿದ್ದರು. ರಮೇಶ ಜಾರಕಿಹೊಳಿ ಅವರು ಅಥಣಿ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ್ ಕುಮಟಳ್ಳಿ ಬೆನ್ನಿಗೆ ನಿಲ್ಲುತ್ತಿದ್ದಂತೆ ಇತ್ತ ಲಕ್ಷ್ಮಣ್ ಸವದಿ ಪುತ್ರ ಚಿದಾನಂದ ಸವದಿ ಅವರು, ತಂದೆ ಲಕ್ಷ್ಮಣ್ ಸವದಿ ಅವರು ಅಥಣಿ ಮತಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ. ಯಾವುದೇ ಕಾರಣಕ್ಕೂ ಮತಕ್ಷೇತ್ರ ಬಿಟ್ಟು ಕೊಡುವ ಪ್ರಶ್ನೆಯಿಲ್ಲ ಎಂದು ಸಮರ ಸಾರಿದ್ದಾರೆ.
ಇದನ್ನೂ ಓದಿ: ಆಪರೇಷನ್ ''ಲಿಂಗಾಯತ ಲೀಡರ್ಸ್ ''.. ಕಾಂಗ್ರೆಸ್ ತೆಕ್ಕೆಗೆ ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಬೆಂಬಲಿಗರು..!