ಬೆಳಗಾವಿ: ಕಳಸಾ ಬಂಡೂರಿ ಮಹದಾಯಿ ಯೋಜನೆಯ ವಿವಾದ ಕಳೆದ ನಾಲ್ಕು ದಶಕಗಳಿಂದ ಮುಂದುವರಿಯುತ್ತಿದೆ. ಮುಂದಿನ ಫೆಬ್ರವರಿಯಲ್ಲಿ ಗೋವಾ ವಿಧಾನಸಭೆ ಚುನಾವಣೆ ನಡೆಯಲಿದ್ದು, ಸಮಸ್ಯೆ ಬೇಗ ಬಗೆಹರಿಸುವಂತೆ ರೈತರು ಆಗ್ರಹಿದ್ದಾರೆ. ಜೊತೆಗೆ ಹೋರಾಟಗಾರರು ರಾಜಕೀಯ ಪಕ್ಷಗಳಿಗೆ ಕೆಲ ಸಲಹೆಗಳ ಜೊತೆಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಕಳಸಾ ಬಂಡೂರಿ ನಾಲೆ ಹಾಗೂ ಮಹದಾಯಿ ನದಿ ವಿವಾದ ಕಳೆದ ನಾಲ್ಕು ದಶಕಗಳಿಂದ ಬಗೆಹರಿಯುತ್ತಿಲ್ಲ. ವಿಪರ್ಯಾಸವೆಂದರೆ 4 ದಶಕಗಳಿಂದಲೂ ಮಹದಾಯಿ ವಿಚಾರವನ್ನು ರಾಜಕೀಯ ದಾಳವನ್ನಾಗಿ ರಾಜಕೀಯ ಪಕ್ಷಗಳು ಬಳಸುತ್ತಾ ಬಂದಿವೆ. 2022ರ ಫೆಬ್ರವರಿಯಲ್ಲಿ ಗೋವಾ ವಿಧಾನಸಭೆಗೆ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಈಗಾಗಲೇ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಗೋವಾದಲ್ಲಿ ಚುನಾವಣಾ ಸಿದ್ಧತೆ ಕೈಗೊಂಡಿವೆ.
ಇನ್ನು, ಗೋವಾದ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್, ಬಿಜೆಪಿ ಉಸ್ತುವಾರಿ ಸಿ.ಟಿ.ರವಿ ಇಬ್ಬರೂ ಕರ್ನಾಟಕದವರೇ. ಕಾಂಗ್ರೆಸ್ ಪಕ್ಷದ ವೀಕ್ಷಕರಾಗಿ ಕರ್ನಾಟಕದ ಕಾಂಗ್ರೆಸ್ ಎಂಎಲ್‌ಸಿ ಪ್ರಕಾಶ್ ರಾಠೋಡ್ ನೇಮಕಗೊಂಡಿದ್ದಾರೆ.
ಮೋದಿ ಸರ್ಕಾರ ಸಂಪೂರ್ಣ ವಿಫಲ:
ಮಹದಾಯಿ ವಿಚಾರವಾಗಿ ಗೋವಾದ ಪಣಜಿಯಲ್ಲಿ ಮಾತನಾಡಿರುವ ಎಂಎಲ್‌ಸಿ ಪ್ರಕಾಶ್ ರಾಠೋಡ್, ಮಹದಾಯಿ ವಿವಾದ ಬಗೆಹರಿಸುವ ಇಚ್ಛಾಶಕ್ತಿ ಪ್ರಧಾನಿ ಮೋದಿಗೆ ಇಲ್ಲ ಎಂದು ಆರೋಪಿಸಿದ್ದಾರೆ. ಕೇಂದ್ರ, ಕರ್ನಾಟಕ ಹಾಗೂ ಗೋವಾದಲ್ಲಿ ಬಿಜೆಪಿ ಸರ್ಕಾರವೇ ಇದೆ. ಪ್ರಧಾನಿ ಮೋದಿ ಮನಸ್ಸು ಮಾಡಿದ್ರೆ ಎರಡು ನಿಮಿಷದಲ್ಲಿ ವಿವಾದ ಬಗೆಹರಿಸಬಹುದು. ಮಹದಾಯಿ ಸಂಬಂಧ ಕರ್ನಾಟಕ ಗೋವಾ ಜಗಳವಾಡಲಿ ಎಂಬುದು ಅವರ ಬಯಕೆಯಾಗಿದೆ. ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ ಎಂದು ಹೇಳಿದರು.
ಮಹದಾಯಿ ವಿವಾದ ಬಗೆಹರಿಸಲು ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಚುನಾವಣೆ ವೇಳೆ ವಿಷಯ ಪ್ರಸ್ತಾಪಿಸಿ ನಂತರ ಬಿಟ್ಟು ಬಿಡುತ್ತಾರೆ. ಇದರಿಂದ ಕರ್ನಾಟಕ, ಗೋವಾದ ಜನರು ತೊಂದರೆಗೊಳಗಾಗುತ್ತಿದ್ದಾರೆ. ಸಮುದ್ರ ಸೇರುವ ಮಹದಾಯಿ ನೀರನ್ನು ನಾವು ಕುಡಿಯಲು ಕೇಳುತ್ತಿದ್ದೇವೆ. ಸಮುದ್ರಕ್ಕೆ ಹೋಗುವ ಮಹದಾಯಿ ನೀರನ್ನು ನಾವು ಬಳಸಲು ಬಯಸುತ್ತೇವೆ. ಪ್ರಧಾನಿ ಮೋದಿ ಕರ್ನಾಟಕ, ಮಹಾರಾಷ್ಟ್ರ, ಗೋವಾ ಸಿಎಂ ಕರೆದು ಮಾತನಾಡಿ ಸಮಸ್ಯೆ ಬಗೆಹರಿಸಲಿ ಎಂದು ತಿಳಿಸಿದ್ದಾರೆ.
ಪ್ರಕಾಶ್ ರಾಠೋಡ್ ಹೇಳಿಕೆಗೆ ತಿರುಗೇಟು ನೀಡಿರುವ ರಾಜ್ಯಸಭಾ ಬಿಜೆಪಿ ಸದಸ್ಯರು, ಮಹದಾಯಿ ಅಂತಾರಾಜ್ಯ ಜಲವಿವಾದ ಆಗಿದ್ದು, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯಸರ್ಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ. ಮೊನ್ನೆ ದೆಹಲಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್‌ರನ್ನು ಭೇಟಿಯಾಗಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮಹದಾಯಿ ವಿಚಾರವಾಗಿ ರಾಜಕಾರಣ ಮಾಡೋದು ಬಿಡಬೇಕೆಂದು ಎಂದು ಹೇಳಿದ್ದಾರೆ.
ಇಚ್ಛಾಶಕ್ತಿ ಕೊರತೆ:
ಮಹದಾಯಿ ವಿಚಾರವನ್ನು ರಾಜಕೀಯ ಪಕ್ಷಗಳು ರಾಜಕೀಯ ದಾಳವಾಗಿ ಬಳಸುತ್ತಿರುವುದಕ್ಕೆ ಮಹದಾಯಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹದಾಯಿ ವಿವಾದ ಕಳೆದ ನಾಲ್ಕು ದಶಕಗಳಿಂದ ರಾಜಕೀಯ ಪಕ್ಷಗಳ ಇಚ್ಛಾಶಕ್ತಿ ಕೊರತೆಯಿಂದ ಬಗೆಹರಿಯುತ್ತಿಲ್ಲ. ಚುನಾವಣೆ ಬಂದಾಗ ಕೇವಲ ರಾಜಕೀಯ ದಾಳವಾಗಿ ಬಳಸಲಾಗುತ್ತಿದೆ. ಮಹದಾಯಿ ಹೋರಾಟದಲ್ಲಿ ಭಾಗಿಯಾಗಿದ್ದ ಬೊಮ್ಮಾಯಿಯವರೇ ಸಿಎಂ ಆಗಿದ್ದಾರೆ. ಹೀಗಾಗಿ ಯಾರ ಅಪ್ಪಣೆ ಪಡೆದುಕೊಳ್ಳದೆ ಕಾಮಗಾರಿಗೆ ಚಾಲನೆ ಕೊಟ್ಟರೆ ಉತ್ತರ ಕರ್ನಾಟಕದ ಎಲ್ಲಾ ಜನರು ನಿಮ್ಮೊಂದಿಗೆ ಇರುತ್ತೇವೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಹೀಗಾಗಿ ಆದಷ್ಟು ಬೇಗ ಕಾಮಗಾರಿ ಮುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಒಂದು ವೇಳೆ ಕಾಮಗಾರಿಗೆ ಚಾಲನೆ ನೀಡದಿದ್ರೆ ರಾಜ್ಯಾದ್ಯಂತ ನಿಮ್ಮ ವಿರುದ್ಧ ಹೋರಾಟ ಕೈಗೊಳ್ಳುವುದರ ಜೊತೆಗೆ ಕೃಷಿ ಸಂಬಂಧಿತ ತೆಗೆದುಕೊಂಡು ಸಾಲವನ್ನು ಮರಳಿ ನೀಡದಂತೆ ಜಾಗೃತಿ ಮೂಡಿಸುತ್ತೇವೆ ಎಂದು ಮಹದಾಯಿ ಹೋರಾಟ ಸಮಿತಿ ಸಂಸ್ಥಾಪಕ ವಿಜಯ ಕುಲಕರ್ಣಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಮಹದಾಯಿ ವಿಚಾರವಾಗಿ ಪ್ರತಿಕ್ರಿಯಿಸಿರುವ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಮಹದಾಯಿ ಮತ್ತು ಕಾವೇರಿ ವಿಚಾರ ರಾಜಕೀಯ ಡ್ರಾಮಾ ಆಗಬಾರದು. ಮಹದಾಯಿ ಯೋಜನೆ ಜಾರಿಗೆ ವಿಳಂಬ ನೀತಿ ಅನುಸರಿಸಿದ್ರೆ ನಾವೇ ಅಡಿಗಲ್ಲು ಹಾಕಿ ಕೆಲಸ ಶುರು ಮಾಡ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬಜೆಟ್ ನಲ್ಲಿ ಹಣ ಮೀಸಲು:
ಮಹದಾಯಿ ಯೋಜನೆ ಜಾರಿ ವಿಚಾರವಾಗಿ ಈಗಾಗಲೇ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ್ದು, ಯೋಜನೆ ಜಾರಿಗೆ ಪರಿಸರ ಇಲಾಖೆ ಅನುಮತಿ ಬೇಕಿದೆ. ಮತ್ತೊಂದೆಡೆ ಈ ಹಿಂದೆ ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಸಚಿವರಾಗಿದ್ದ ವೇಳೆ ಕಾಮಗಾರಿಗೆ ಬಜೆಟ್ ನಲ್ಲಿ ಹಣವನ್ನು ಮೀಸಲಿಟ್ಟಿದೆ. ದೆಹಲಿ ಭೇಟಿ ವೇಳೆ ಸಿಎಂ ಬಸವರಾಜ ಬೊಮ್ಮಾಯಿಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್‌ರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಅಂತಾ ಹೇಳಲಾಗುತ್ತಿದ್ದು, ಮಹದಾಯಿ ಯೋಜನೆ ಜಾರಿಗೆ ವಿಳಂಬ ನೀತಿ ಅನುಸರಿಸದೆ ಆದಷ್ಟು ಬೇಗ ಕಾಮಗಾರಿ ಪ್ರಾರಂಭವಾಗಲಿ ಎಂಬುದು ಉತ್ತರ ಕರ್ನಾಟಕ ಜನರ ಹಕ್ಕೊತ್ತಾಯವಾಗಿದೆ.