ಸಿಬ್ಬಂದಿಯಲ್ಲಿ ಹೆಚ್ಚುತ್ತಿರುವ ಸೋಂಕು.. ಆತಂಕದಲ್ಲಿ ಬೆಳಗಾವಿ ಪೊಲೀಸ್ ಇಲಾಖೆ! - belgaum corona case
ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯ ನಿಭಾಯಿಸುತ್ತಿದ್ದ ಮೂವತ್ತಕ್ಕೂ ಹೆಚ್ಚು ಪೊಲೀಸರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇನ್ನೆಷ್ಟು ಸಿಬ್ಬಂದಿಗೆ ಕೊರೊನಾ ವಕ್ಕರಿಸಲಿದೆಯೋ ಎಂಬ ಭಯದಲ್ಲಿದ್ದಾರೆ.
ಬೆಳಗಾವಿ: ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯ ನಿಭಾಯಿಸುತ್ತಿದ್ದ ಪೊಲೀಸರಿಗೂ ಇದೀಗ ಕೊರೊನಾ ಸೋಂಕು ತಗುಲುತ್ತಿದೆ. ಹೀಗಾಗಿ ಕಳೆದ ನಾಲ್ಕು ತಿಂಗಳಿಂದ ಮಹಾರಾಷ್ಟ್ರ ಗಡಿ ಭಾಗದ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್ ಪೋಸ್ಟ್, ಕಾಗವಾಡ ಚೆಕ್ ಪೋಸ್ಟ್ ಮತ್ತು ಗೋವಾ ಗಡಿಯ ಕಣಕುಂಬಿ ಚೆಕ್ ಪೋಸ್ಟ್ನಲ್ಲಿ ಹಗಲು-ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸಿದ್ದ ಕೆಎಸ್ಆರ್‌ಪಿ ಸಿಬ್ಬಂದಿ ಇದೀಗ ಗಡಿಯಲ್ಲಿ ಕರ್ತವ್ಯ ನಿರ್ವಹಿಸುವುದನ್ನೇ ಬಿಟ್ಟಿದ್ದಾರೆ.
ಹನ್ನೆರಡು ಜನ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆ, ಕೆಎಸ್ಆರ್‌ಪಿ ಮೀಸಲು ಪಡೆಯ ಇನ್ನೆಷ್ಟು ಸಿಬ್ಬಂದಿಗೆ ಕೊರೊನಾ ವಕ್ಕರಿಸಲಿದೆಯೋ ಎಂಬ ಭಯ ಶುರುವಾಗಿದೆ. ಈ ಕಾರಣಕ್ಕಾಗಿ ಮುಂಜಾಗ್ರತೆ ಕ್ರಮವಾಗಿ ಕೊಗನೊಳ್ಳಿ ಚೆಕ್ ಪೋಸ್ಟ್, ಕಾಗವಾಡ ಚೆಕ್ ಪೋಸ್ಟ್ ಮತ್ತು ಕಣಕುಂಬಿ ಚೆಕ್ ಪೋಸ್ಟ್ನಲ್ಲಿ ನೇಮಕ ಮಾಡಿದ್ದ ಕೆಎಸ್ಆರ್‌ಪಿ ತುಕಡಿಗಳನ್ನು ಈಗಾಗಲೇ ವಾಪಸ್ ಕಳುಹಿಸಲಾಗಿದೆ. 697ಕ್ಕೂ ಅಧಿಕ ಸಿಬ್ಬಂದಿ ಬೆಳಗಾವಿ ತಾಲೂಕಿನ ಮಚ್ಚೆ ಕೆಎಸ್ಆರ್‌ಪಿ ಬಟಾಲಿಯನ್ನಲ್ಲಿದ್ದು, ಇದೀಗ ಈ ಎಲ್ಲ ಸಿಬ್ಬಂದಿಗೂ ಸೋಂಕು ಹರಡುವ ಭೀತಿ ಎದುರಾಗಿದೆ. ಈ ಕಾರಣಕ್ಕೆ ಹೊರಗಡೆ ಡ್ಯೂಟಿ ಮಾಡಿ ಬರುವ ಸಿಬ್ಬಂದಿಗೆ ಬಟಾಲಿಯನ್ ಒಳಗೆ ಪ್ರತ್ಯೇಕ ಕೊಠಡಿ ನೀಡಿದ್ದು, ಅಲ್ಲಿ ಸುಮಾರು ಎಂಬತ್ತಕ್ಕೂ ಅಧಿಕ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಇತ್ತ ಸಿಬ್ಬಂದಿ ಕುಟುಂಬಸ್ಥರಿಬ್ಬರಿಗೆ ಸೋಂಕು ತಗುಲಿದೆ.
ಒಂದು ಕಡೆ ಕೆಎಸ್ಆರ್‌ಪಿ ಬಟಾಲಿಯನ್ಗೆ ಕೊರೊನಾ ಕಾಡುತ್ತಿದ್ದರೆ, ಇತ್ತ ಸಿವಿಲ್ ಪೊಲೀಸ್ ಇಲಾಖೆಗೂ ಸೋಂಕು ಬಿಡುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಕೊಗನೊಳ್ಳಿ ಚೆಕ್ ಪೋಸ್ಟ್ನಲ್ಲಿ ಕೆಲಸ ಮಾಡಿದ್ದ ನಿಪ್ಪಾಣಿ ಸಿಪಿಐಗೆ ಸೋಂಕು ದೃಢಪಟ್ಟಿದ್ದು, ನಿಪ್ಪಾಣಿ ಸಿಪಿಐ ಪೊಲೀಸ್ ಠಾಣೆಯನ್ನು ಸೀಲ್ಡೌನ್ ಮಾಡಲಾಗಿದೆ. ಇನ್ನೂ, ಸಿಪಿಐ ಪ್ರಾಥಮಿಕ ಸಂಪರ್ಕಕ್ಕೆ ಬಂದ ಓರ್ವ ಪಿಎಸ್ಐ ಮತ್ತು ಹತ್ತು ಜನ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಇತ್ತ ಜಿಲ್ಲೆಯ ಮೂಡಲಗಿ ತಾಲೂಕಿನಲ್ಲಿರುವ ಮೂಡಲಗಿ ಪೊಲೀಸ್ ಠಾಣೆ ಹಿರಿಯ ಪೇದೆಗೂ ಸೋಂಕು ತಗುಲಿದ್ದು, ಈ ಠಾಣೆಯನ್ನು ಸೀಲ್ಡೌನ್ ಮಾಡಲಾಗಿದೆ. ಪೇದೆ ಪ್ರಾಥಮಿಕ ಸಂಪರ್ಕಕ್ಕೆ ಬಂದ ಹನ್ನೆರಡಕ್ಕೂ ಅಧಿಕ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಚಿಕ್ಕೋಡಿಯ ಟ್ರಾಫಿಕ್ ಪೇದೆಗೂ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಮೂವತ್ತಕ್ಕೂ ಹೆಚ್ಚು ಪೊಲೀಸರಿಗೆ ಸೋಂಕು ದೃಢಪಟ್ಟಿದೆ.
ಈ ಎಲ್ಲ ಪೊಲೀಸರ ಪ್ರಾಥಮಿಕ ಸಂಪರ್ಕಕ್ಕೆ ಬಂದ ಎಂಭತ್ತಕ್ಕೂ ಅಧಿಕ ಸಿಬ್ಬಂದಿ ಹಾಗೂ ಅವರ ಕುಟುಂಬಸ್ಥರು ಕ್ವಾರಂಟೈನ್ನಲ್ಲಿದ್ದಾರೆ. ಪೊಲೀಸರ ಆರೋಗ್ಯ ಹಿತದೃಷ್ಟಿಯಿಂದ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಕೆಎಸ್ಆರ್‌ಪಿ ಕಮಾಂಡೆಂಟ್ ಹಮ್ಜಾ ಹುಸೇನ್ ತಿಳಿಸಿದ್ದಾರೆ.