ಬೆಳಗಾವಿ : ಬುಡಾ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳಲಿರುವ ಹೊಸ ಬಡಾವಣೆಗಳಲ್ಲಿ ಉದ್ಯಾನ, ರಸ್ತೆ, ಒಳಚರಂಡಿ, ನಾಗರಿಕ ಸೌಲಭ್ಯ ನಿವೇಶನ ಮತ್ತಿತರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಬಗ್ಗೆ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಪರಿಶೀಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸೂಚಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಿಯಮಬಾಹಿರ ಬಡಾವಣೆಗಳಿಗೆ ಅನುಮತಿ ನೀಡಬಾರದು. ಈ ಬಗ್ಗೆ ಅಧಿಕಾರಿಗಳು ಸೂಕ್ತ ಪರಿಶೀಲನೆ ಕೈಗೊಂಡ ಬಳಿಕವೇ ಪ್ರಾಧಿಕಾರದಿಂದ ಅನುಮೋದನೆ ನೀಡಬೇಕು ಎಂದರು.
ಬೆಳಗಾವಿ ನಗರದ ಮಹಾಯೋಜನೆ ಪರಿಷ್ಕೃತ -3 ನ್ನು ಹಾಲಿ ಸ್ಥಳೀಯ ಯೋಜನಾ ಪ್ರದೇಶ ಹಾಗೂ ಹೆಚ್ಚುವರಿಯಾಗಿ 28 ಗ್ರಾಮಗಳನ್ನು ಸೇರಿಸಿ ಹಾಲಿ ಸ್ಥಳೀಯ ಯೋಜನಾ ಪ್ರದೇಶ ಘೋಷಿಸಿರುವ ಗ್ರಾಮ/ಪಟ್ಟಣಗಳಿಗೆ ಜಿಐಎಸ್ ಆಧಾರಿತ ಅಮೃತ ಟಿ.ಆರ್.ಓ. ಅನ್ವಯ ಮಹಾಯೋಜನೆ ತಯಾರಿಸಲು ಅನುಮೋದನೆಗೆ ಒಪ್ಪಿಗೆ ನೀಡಲಾಯಿತು. ಕೆಲವೆಡೆ ಎರಡು ಗ್ರಾಮಗಳ ನಡುವಿನ ಗ್ರಾಮ ಬಿಟ್ಟು ಹೋಗಿದ್ದು, ಅವುಗಳನ್ನು ಹೆಚ್ಚುವರಿ ಸೇರ್ಪಡೆಗೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚನೆ ಕೊಟ್ಟರು.
ಇದೇ ವೇಳೆ, ನಿವೇಶನಗಳ ದರ ನಿಗದಿ ಹಾಗೂ ಹಂಚಿಕೆ ಕುರಿತು ಮಾಹಿತಿಯನ್ನು ಪಡೆದುಕೊಂಡರು. ಇದಲ್ಲದೇ ಇ - ಹರಾಜು ಹಾಗೂ ಮ್ಯಾನ್ಯುವಲ್ ಹರಾಜು ಪ್ರಕ್ರಿಯೆ ಸಂದರ್ಭದಲ್ಲಿ ಪಾಲಿಸಲಾದ ನಿಯಮಗಳ ಬಗ್ಗೆ ಚರ್ಚಿಸಿದ ಸತೀಶ ಜಾರಕಿಹೊಳಿ, ಇ-ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ನಿಗದಿಪಡಿಸಲಾಗಿರುವ ಇಎಂಡಿ ಹೆಚ್ಚಿಸುವ ಬಗ್ಗೆ ಕೈಗೊಂಡ ನಿರ್ಣಯ ಅಂಗೀಕರಿಸಬಹುದು ಎಂದರು.
ನಗರದಲ್ಲಿ ವಿಶಾಲವಾದ ಜಿಲ್ಲಾ ಕ್ರೀಡಾಂಗಣಕ್ಕೆ ಅಗತ್ಯವಾದ ಜಮೀನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಸತೀಶ ಜಾರಕಿಹೊಳಿ, ಎಲ್ಲ ರೀತಿಯಲ್ಲಿ ಅನುಕೂಲವಾಗುವಂತಹ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸಲಾಗುವುದು ಎಂದರು. ಜೊತೆಗೆ ಮಾಸ್ಟರ್ ಪ್ಲಾನ್ ಅವಧಿ ಮುಗಿದಿದ್ದು, ಪರಿಷ್ಕೃತ ಪ್ಲ್ಯಾನ್ ಜಾರಿಗೆ ಬರುವವರೆಗೆ ಹಳೆಯ ಪ್ಲ್ಯಾನ್ ಮುಂದುವರಿಸಲು ಅನುಮೋದನೆ ನೀಡಬೇಕಿದೆ ಎಂದು ಬುಡಾ ಆಯುಕ್ತ ಷಕೀಲ್ ಅಹ್ಮದ್ ಸಭೆಯಲ್ಲಿ ಚರ್ಚಿಸಿದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ, ಅನುಮತಿ ಪಡೆದುಕೊಂಡ ಹೊಸ ಬಡಾವಣೆಗಳಲ್ಲಿ ನಿಯಮಾವಳಿ ಪಾಲಿಸಿರುವುದನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು. ಉದ್ಯಾನ, ಯುಜಿಡಿ, ವಿದ್ಯುತ್ ಸಂಪರ್ಕ, ರಸ್ತೆ ಮತ್ತಿತರ ಅಭಿವೃದ್ಧಿ ಸಂಪೂರ್ಣಗೊಂಡಿರುವ ಬಡಾವಣೆಗಳಿಗೆ ಮಾತ್ರ ಅನುಮತಿ ನೀಡಬೇಕು ಎಂದು ನುಡಿದರು.
ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಳ್ಳುವ ಯೋಜನೆಗಳು ಹಾಗೂ ಮಂಜೂರಾತಿ ಕುರಿತು ಸಂಬಂಧಿಸಿದ ಶಾಸಕರ ಗಮನಕ್ಕೆ ತಂದು ನಿರ್ಣಯ ಕೈಗೊಳ್ಳಬೇಕು. ಈಗಾಗಲೇ ನಿರ್ಮಾಣಗೊಂಡಿರುವ ಬಡಾವಣೆಗಳು ನಿಯಮಾವಳಿ ಪಾಲಿಸಿರುವ ಬಗ್ಗೆ ಸಮಗ್ರ ಸಮೀಕ್ಷೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಅಭಯ್ ಪಾಟೀಲ ಹೇಳಿದರು. ಶಾಸಕ ಆಸಿಫ್(ರಾಜು ಸೇಠ್) ಮಾತನಾಡಿ, ಬಡಾವಣೆ ಅಭಿವೃದ್ಧಿ ಮತ್ತು ಸಮರ್ಪಕ ನಿರ್ವಹಣೆಗೆ ಆದ್ಯತೆ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಹಾಗೂ ಬುಡಾ ಆಡಳಿತಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, ಕಣಬರ್ಗಿ ಬಡಾವಣೆ ಅಭಿವೃದ್ಧಿಗೆ 87 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಇತರೆ ಅಭಿವೃದ್ಧಿ ಕೆಲಸಕ್ಕೆ 9 ಕೋಟಿ ರೂ. ಲಭ್ಯವಿದ್ದು, ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡ ಕಾಮಗಾರಿ ಹೊರತುಪಡಿಸಿ ಇತರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬಹುದು. ಕೆರೆಯ ಸುತ್ತಮುತ್ತಲಿನ ಜಾಗೆಗಳ ಅತಿಕ್ರಮಣ ಪರಿಶೀಲಿಸಿ ವರದಿ ಸಲ್ಲಿಸುವಂತೆ ತಿಳಿಸಿದರು.
ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಸಭೆ : ಇದಾದ ಬಳಿಕ ನಡೆದ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ನ ಮ್ಯಾನೇಜಿಂಗ್ ಕಮಿಟಿ ಮತ್ತು ಆಡಳಿತ ಸಮಿತಿಯ ಸಭೆ ನಡೆಯಿತು. 7.85 ಕೋಟಿ ರೂಪಾಯಿ ಅನುದಾನ ಲಭ್ಯವಿದ್ದು, ಇದಕ್ಕಾಗಿ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ವಿವರಿಸಿದರು.
ಸದರಿ ಪ್ರಸ್ತಾವನೆ ಹಾಗೂ ಅನುದಾನದ ಸಮರ್ಪಕ ಹಂಚಿಕೆ ಕುರಿತು ಮುಂದಿನ ಸಭೆಯಲ್ಲಿ ವಿಸ್ತೃತವಾದ ವರದಿ ಮಂಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ತಿಳಿಸಿದರು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ , ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಶಾಸಕ ಆಸೀಫ್ ಸೇಠ್, ಖಾನಾಪುರ ಶಾಸಕ ವಿಠ್ಠಲ ಹಲಗೇಕರ್, ಮಹಾನಗರ ಪಾಲಿಕೆಯ ಆಯುಕ್ತ ಅಶೋಕ ದುಡಗುಂಟಿ ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ : ಪಿಡಿಒ ಅಧಿಕಾರಿಗಳ ಜೇಷ್ಠತಾ ಪಟ್ಟಿ ಪರಿಶೀಲಿಸಿ ಅಂತಿಮಪಟ್ಟಿ ಪ್ರಕಟಿಸಲು ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ