ಬೆಳಗಾವಿ: ದೆಹಲಿಯಲ್ಲಿ ದಿ. ಸುರೇಶ್ ಅಂಗಡಿ ಅವರ ಸ್ಮಾರಕ ನಿರ್ಮಾಣ ಸಂಬಂಧ ದೆಹಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಗತ್ಯ ಹಣ ಮಂಜೂರು ಮಾಡಿ ಸ್ಮಾರಕ ನಿರ್ಮಾಣಕ್ಕೆ ಆದ್ಯತೆ ನೀಡುತ್ತೇನೆ. ಸುರೇಶ್ ಅಂಗಡಿ ಅವರ ಸ್ಮಾರಕ ನಿರ್ಮಾಣ ನನ್ನ ಕರ್ತವ್ಯ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸುರೇಶ್ ಅಂಗಡಿ ಅವರು ನನ್ನ ಆತ್ಮೀಯ ಗೆಳೆಯರಾಗಿದ್ದರು. ಸದ್ಯ ನಮ್ಮನ್ನು ಅಗಲಿದ್ದಾರೆ ಎಂದರೆ ನಂಬಲಾಗುತ್ತಿಲ್ಲ. ನಾಲ್ಕು ಸಲ ಸಂಸದರಾಗಿದ್ದರು, ರೈಲ್ವೆ ಸಚಿವರಾಗಿಯೂ ಜವಾಬ್ದಾರಿ ವಹಿಸಿಕೊಂಡಿದ್ದರು. ಜಾಫರ್ ಶರೀಫ್ ಅವರಂತೆ ಸುರೇಶ್ ಅಂಗಡಿ ಅವರು ಕೆಲಸ ಮಾಡುತ್ತಿದ್ದರು. ರಾಜ್ಯದಲ್ಲಿ ರೈಲ್ವೆ ಯೋಜನೆಗೆ ಒತ್ತು ನೀಡಿದ್ದರು. ರಾಜ್ಯಕ್ಕೆ ಅವರು ಕೊಟ್ಟ ಕೊಡುಗೆ ಅಪಾರ ಎಂದು ಅಂಗಡಿಯವರನ್ನು ಸ್ಮರಿಸಿದರು.
ದೆಹಲಿಗೆ ಹೋದ ಕೂಡಲೇ ಅವರಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ದೆಹಲಿಯಲ್ಲಿದ್ದರೂ ತಕ್ಷಣವೇ ಆಸ್ಪತ್ರೆಗೆ ದಾಖಲಾಗದೆ ಎರಡು ದಿನ ಮನೆಯಲ್ಲಿದ್ದರು. ಆರೋಗ್ಯದ ಬಗ್ಗೆ ಅವರು ನಿರ್ಲಕ್ಷ್ಯ ವಹಿಸಿದ್ದರು. ನನಗೇನೂ ಆಗಲ್ಲ ಎಂದು ತಿಳಿದಿದ್ದರು. ಆದರೀಗ ಅವರು ನಮ್ಮೊಂದಿಗಿಲ್ಲ ಎಂದು ಬೇಸರ ವ್ಯಕ್ತಪಡಿಸಿ, ಅಂಗಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಬಂದಿದ್ದೇನೆ ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶೇಷ ವಿಮಾನದ ಮೂಲಕ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ನಂತರ ಸುರೇಶ್ ಅಂಗಡಿ ಅವರ ನಿವಾಸಕ್ಕೆ ತೆರಳಿದರು. ಸಿಎಂಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಜಗದೀಶ್ ಶೆಟ್ಟರ್, ರಮೇಶ್ ಜಾರಕಿಹೊಳಿ ಸಾಥ್ ನೀಡಿದರು.