ಅಥಣಿ: ತಾಲೂಕಿನ ಹುಲಗಬಾಳ ಗ್ರಾಮ ಪಂಚಾಯಿತಿ ಕ್ಷೇತ್ರ ಎರಡನೇ ಹಂತದ ಚುನಾವಣೆಗೆ ಸಿದ್ದಗೊಳ್ಳುತ್ತಿದ್ದು, ಅಭ್ಯರ್ಥಿಗಳ ಪ್ರಚಾರ ಭರದಿಂದ ಸಾಗಿದೆ. ಅಧಿಕಾರದ ಚುಕ್ಕಾಣಿ ಹಿಡಿಯುವ ತವಕದಲ್ಲಿರುವ ಅಭ್ಯರ್ಥಿಗಳು ಬಿಜೆಪಿ ಪಕ್ಷದ ಚಿಹ್ನೆ ಹಾಗೂ ನಾಯಕರ ಪೋಟೋ ಬಳಸಿ ಪ್ರಚಾರ ಕಾರ್ಯದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ.
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಯಾವುದೇ ಪಕ್ಷ ಅಥವಾ ಪಕ್ಷದ ಚಿಹ್ನೆ ಹಾಗೂ ನಾಯಕರ ಫೋಟೋ ಬಳಸದೆ ಅಭ್ಯರ್ಥಿಗಳು ಸ್ಪರ್ಧಿಸಬೇಕು ಎಂದು ಚುನಾವಣಾ ಆಯೋಗ ಸ್ಪಷ್ಟ ನಿರ್ದೇಶನ ನೀಡಿದೆ. ಆದರೆ ಹುಲಗಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ಲಟ್ಟಿ ಗ್ರಾಮದ ನಾಲ್ಕು ಅಭ್ಯರ್ಥಿಗಳು ರಾಷ್ಟ್ರೀಯ ಪಕ್ಷವಾದ ಬಿಜೆಪಿಯ ಚಿಹ್ನೆ ಹಾಗೂ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಫೋಟೋ ಬಳಸಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರವಿ ಬಂಗಾರಪ್ಪನವರ್ ದೂರವಾಣಿ ಮೂಲಕ ಈಟಿವಿ ಭಾರತ್ ಪ್ರತಿನಿಧಿಗೆ ಪ್ರತಿಕ್ರಿಯಿಸಿದ್ದು, ರಾಷ್ಟ್ರೀಯ ಪಕ್ಷದ ಚಿಹ್ನೆ ಬಳಸಿ ಗ್ರಾಮ ಪಂಚಾಯಿತಿ ಚುನಾವಣೆ ಪ್ರಚಾರ ಮಾಡುವುದು ಅಪರಾಧ, ಯಾರಾದರೂ ದೂರು ನೀಡಿದರೆ ರಾಷ್ಟ್ರೀಯ ಪಕ್ಷದ ಚಿಹ್ನೆ ಬಳಸಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.