ಬೆಳಗಾವಿ: ಪ್ರತ್ಯೇಕ ಧರ್ಮದ ಕುರಿತು ಎಂ.ಬಿ.ಪಾಟೀಲ್ ಹೈಕಮಾಂಡ್ಗೆ ಪತ್ರ ಬರೆದಿದ್ದು ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ. ಆದರೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ, ಇದು ಎಂ.ಬಿ.ಪಾಟೀಲ್ರ ವೈಯಕ್ತಿಕ ವಿಷಯ ಎಂದು ಹೇಳಿದ್ದಾರೆ.
ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಸೋನಿಯಾ ಗಾಂಧಿ ಅವರಿಗೆ ರಾಜ್ಯ ಗೃಹ ಸಚಿವ ಎಂ.ಬಿ.ಪಾಟೀಲ್ ಬರೆದಿದ್ದಾರೆ ಎನ್ನಲಾದ ಪತ್ರ ಬಿಜೆಪಿಗರಿಗೆ ಅಸ್ತ್ರವಾಗಿದೆ. ಯಡಿಯೂರಪ್ಪ ಸಹ ಇದೇ ವಿಚಾರವಾಗಿ ಎಂ.ಬಿ. ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಮಾಧ್ಯಮದವರು ಸತೀಶ್ ಜಾರಕಿಹೊಳಿರನ್ನು ಪ್ರಶ್ನಿಸಿದಾಗ, ಇದು ಎಂ.ಬಿ.ಪಾಟೀಲ್ ಅವರ ವೈಯಕ್ತಿಕ ವಿಷಯ. ಈಗಾಗಲೇ ಪತ್ರದ ಕುರಿತು ಹಲವಾರು ಚರ್ಚೆಗಳಾಗಿವೆ. ಇದು ಮುಗಿದು ಹೋದ ಅಧ್ಯಾಯ. ಈ ಪತ್ರವನ್ನು ಹೈಕಮಾಂಡ್ಗೆ ಬರೆದಿಲ್ಲ ಎಂದು ಸ್ವತಃ ಎಂ.ಬಿ.ಪಾಟೀಲ್ ಹೇಳಿರುವಾಗ ಈ ವಿಷಯದ ಬಗ್ಗೆ ಚರ್ಚೆ ಬೇಡ ಎಂದಿದ್ದಾರೆ.
ಲಿಂಗಾಯತ ಧರ್ಮ ವಿಭಜನೆ ಮಾಡಿದರೆ ಬಿಜೆಪಿಗೆ ಇರುವ ಲಿಂಗಾಯತ ಮತಗಳನ್ನು ಒಡೆಯಬಹುದು. ಹಾಗೂ ಆರ್ಎಸ್ಎಸ್ನಿಂದ ಲಿಂಗಾಯತ ಯುವಕರನ್ನು ಬೇರ್ಪಡಿಸಿ, ಬಿಜೆಪಿಗೆ ಆಗುತ್ತಿರುವ ಲಾಭವನ್ನು ಕಡಿಮೆ ಮಾಡಬಹುದು. ಅದಕ್ಕಾಗಿ ಲಿಂಗಾಯತ ಧರ್ಮ ವಿಭಜನೆಯನ್ನು ಸರ್ಕಾರ ಒಪ್ಪಬೇಕು ಎಂದು ಉಲ್ಲೇಖಿಸಲಾದ ವಿವಾದಾತ್ಮಕ ಪತ್ರವನ್ನು ಎಂ.ಬಿ. ಪಾಟೀಲ್ರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದಿದ್ದರು ಎನ್ನಲಾಗಿದೆ.