ಅರಕಲಗೂಡು (ಹಾಸನ): ರಾಮನಾಥಪುರ- ಕಾವೇರಿ ನದಿ ದಂಡೆಯಲ್ಲಿರುವ ಶ್ರೀರಾಮೇಶ್ವರಸ್ವಾಮಿ ಮತ್ತು ಸುಬ್ರಹ್ಮಣ್ಯಸ್ವಾಮಿ ದೇವಾಲಯದ ರಸ್ತೆಯ ಮಟ್ಟಕ್ಕೆ ಪ್ರವಾಹದ ನೀರು ಹರಿದುಬರುತ್ತಿದೆ. ಮಳೆ ನೀರು ಕೆಲ ಮನೆಗಳಿಗೂ ನುಗ್ಗಿದ್ದು, ಸ್ಥಳ ಪರಿಶೀಲನೆಗೆಂದು ಶಾಸಕ ಎ.ಟಿ.ರಾಮಸ್ವಾಮಿ ಹಾಗೂ ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಭೇಟಿ ನೀಡಿದರು.
ಈ ವೇಳೆ ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ಈ ಬಾರಿಯೂ ಧಾರಾಕಾರ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ. ಇದರಿಂದಾಗಿ ಅನೇಕ ಮನೆಗಳು ಜಲಾವೃತವಾಗುವ ಭೀತಿಯಲ್ಲಿವೆ. ನೀರನ್ನು ಹಿಡಿದಿಡುವ ಸಾಮರ್ಥ್ಯವನ್ನು ಭೂಮಿ ಕಳೆದುಕೊಂಡಿರುವುದೇ ಇದಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ಸರ್ಕಾರವು ಪ್ರಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕಿದೆ ಎಂದರು.
ತಡೆಗೋಡೆಗೆ ಈಗಾಗಲೇ ಲೋಕೋಪಯೋಗಿ ಇಲಾಖೆಗೆ ಒಂದು ಕೋಟಿ ರೂಗೆ ಟೆಂಡರ್ ಆಗಿದೆ. ಕೊರೊನಾ ಮತ್ತು ಮಳೆ ಕಾರಣದಿಂದ ಕಾಮಗಾರಿ ಮುಂದೂಡಲಾಗಿದೆ. ಈ ಎಲ್ಲಾ ಸಮಸ್ಯೆಗಳು ದೂರವಾದ ಮೇಲೆ ತಡೆಗೋಡೆ ಕೆಲಸ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.
ತಾಲೂಕಿನ ಹೊನ್ನವಳ್ಳಿ ಗ್ರಾಮದ ಅಂಗನವಾಡಿ ಕಾರ್ಯಕರ್ತೆೆ ಕೊರೊನಾದಿಂದ ಮೃತಪಟ್ಟಿದ್ದಾರೆ. ಅವರ ಮೃತದೇಹದ ಅಂತ್ಯಕ್ರಿಯೆಯನ್ನು ಕೋವಿಡ್ ನಿಯಮದಂತೆ ನಡೆಸಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.