ಬೆಳಗಾವಿ: ರೈತರ ಕುರಿತು ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ ನೀಡಿದ ಹೇಳಿಕೆ ಖಂಡಿಸಿ ಬೆಳಗಾವಿಯ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಮುಂಭಾಗ ಇಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿರುವ ಸಚಿವ ಶಿವಾನಂದ ಪಾಟೀಲರ ಕಚೇರಿಗೆ ಬೀಗ ಜಡಿಯಲು ಯತ್ನಿಸಿದರು. ಕೂಡಲೇ ಸಚಿವ ಸ್ಥಾನಕ್ಕೆ ಪಾಟೀಲರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಕಚೇರಿಗೆ ಭಂಡಾರ ತೂರಲು ಮುಂದಾದರು. ಇದನ್ನು ತಡೆದ ಪೊಲೀಸರು, ರೈತರು ಚೀಲದಲ್ಲಿ ತುಂಬಿಕೊಂಡು ಬಂದಿದ್ದ ಭಂಡಾರವನ್ನು ವಶಕ್ಕೆ ಪಡೆದುಕೊಂಡರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ಹೋರಾಟಗಾರರನ್ನು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕರೆದೊಯ್ದರು.
ಇದಕ್ಕೂ ಮೊದಲು ಮಾಧ್ಯಮಗಳ ಜೊತೆಗೆ ಮಾತನಾಡಿದ ರೈತ ಮುಖಂಡ ಪ್ರಕಾಶ ನಾಯಿಕ, "ಶಿವಾನಂದ ಪಾಟೀಲರು ರೈತರ ಬಗ್ಗೆ ಮಾತನಾಡುತ್ತಿರುವುದು ಇದು ಮೂರನೇ ಸಾರಿ. ಸರ್ಕಾರದ ಪ್ರತಿನಿಧಿಯಾಗಿ ಬುದ್ಧಿಗೇಡಿ ಹೇಳಿಕೆ ನೀಡುವ ಮೂಲಕ ಇಡೀ ರೈತ ಕುಲಕ್ಕೆ ಅಪಮಾನ ಮಾಡಿದ್ದಾರೆ. ಇಂಥವರು ನಮ್ಮ ಭಾಗಕ್ಕೆ ಇನ್ಮುಂದೆ ಬರುವ ಅವಶ್ಯಕತೆ ಇಲ್ಲ" ಎಂದರು.
"ಸಚಿವರ ಕಚೇರಿಗೆ ನಾವು ಭಂಡಾರ ಎರಚಲು ಬಂದಿದ್ದೆವು. ರೈತರ ಬಗ್ಗೆ ನಾಲಿಗೆ ಹರಿಬಿಟ್ಟ ಶಿವಾನಂದ ಪಾಟೀಲ್ ಕೂಡಲೇ ರಾಜೀನಾಮೆ ಕೊಡಬೇಕು. ರೈತರ ಬಗ್ಗೆ ಪದೇ ಪದೇ ಅವಹೇಳನ ಮಾಡುತ್ತಿರುವ ಸಚಿವರ ನಡೆ ಖಂಡನೀಯ. ಸಿಎಂ ಸಿದ್ದರಾಮಯ್ಯ ತಕ್ಷಣವೇ ಪಾಟೀಲರ ರಾಜೀನಾಮೆ ಪಡೆಯಬೇಕು. ಇಲ್ಲದಿದ್ದರೆ ಅವರು ಎಲ್ಲಿ ಹೋಗ್ತಾರೋ ಅಲ್ಲಿ ಮುತ್ತಿಗೆ ಹಾಕಬೇಕಾಗುತ್ತದೆ. ಅವರ ಬಿಡಿಗಾಸು ಪರಿಹಾರವೂ ನಮಗೆ ಬೇಡ" ಎಂದು ಮತ್ತೊಬ್ಬ ರೈತ ಮುಖಂಡ ಚೂನಪ್ಪ ಪೂಜಾರಿ ಹೇಳಿದರು.
ಇದನ್ನೂ ಓದಿ: 'ಅಭಿವೃದ್ಧಿ ಸಹಿಸದ ಕಾಂಗ್ರೆಸ್ ನಾಯಕರಿಂದ ನನ್ನ ತೇಜೋವಧೆ'