ಬೆಳಗಾವಿ: ರಸ್ತೆ ಕಾಮಗಾರಿಗೆಂದು ಭೂಸ್ವಾಧೀನ ಪಡಿಸಿಕೊಂಡ ಜಮೀನು ಪರಿಶೀಲನೆಗೆ ಎಂದು ಜಿಲ್ಲಾಧಿಕಾರಿಗಳು ತೆರಳಿದ್ದ ವೇಳೆ ರೈತ ಮಹಿಳೆಯೊಬ್ಬರು ಕೈಯಲ್ಲಿ ಕುಡುಗೋಲು ಹಿಡಿದೇ ನಾವು ರಸ್ತೆಗೆ ಜಮೀನು ನೀಡುವುದಿಲ್ಲ ಎಂದು ಡಿಸಿ ವಿರುದ್ಧ ಆಕ್ರೋಶ ಹೊರಹಾಕಿ ಘಟನೆ ಜರುಗಿದೆ.
ಬೆಳಗಾವಿ ತಾಲೂಕಿನ ಹಲಗಾ - ಮಚ್ಛೆ ಬೈಪಾಸ್ ರಸ್ತೆಗೆ ರೈತರು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಕಾಮಗಾರಿ ನಡೆಯಲಿರುವ 9.5 ಕಿಮೀ ಜಾಗದ ಉದ್ಧಕ್ಕೂ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ವೇಳೆ ಅನಗೋಳ ಗ್ರಾಮದ ಬಳಿ ಓರ್ವ ರೈತ ಮಹಿಳೆ ಡಿಸಿ ಎದುರೇ ಕುಡಗೋಲು ತೋರಿಸಿ ನಮ್ಮ ಜಮೀನು ನೀಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಗೋಳ ಗ್ರಾಮದ ಗೀತಾ ಯಲ್ಲಪ್ಪ ಎಂಬ ರೈತ ಮಹಿಳೆ ಬುದ್ರುಕ್ ಎಂಬ ಮಹಿಳೆ ಕೈಯಲ್ಲಿ ಕುಡಗೋಲು ಹಿಡಿದು ಮರಾಠಿ ಭಾಷೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ರೈತ ಮಹಿಳೆ ಆಕ್ರೋಶ ಕಂಡು ಬೆಳಗಾವಿ ಡಿಸಿ ಕಕ್ಕಾಬಿಕ್ಕಿಯಾದರು. ಈ ವೇಳೆ, ಅಲ್ಲಿಯೇ ಇದ್ದ ಪೊಲೀಸರ ಮಹಿಳೆಯ ಕೈಯಲ್ಲಿದ್ದ ಕುಡುಗೋಲನ್ನು ಕಸಿದುಕೊಂಡು ಆಕೆಯನ್ನು ಸಮಾಧಾನಪಡಿಸಿದರು.
ಇದಲ್ಲದೇ ಕೆಲ ರೈತರಿಂದ ಸ್ವಾಧೀನಪಡಿಸಿಕೊಳ್ಳಲಾದ ಭೂಮಿಗೆ 57 ಲಕ್ಷ ಪರಿಹಾರ ನೀಡಲು 11 ಲಕ್ಷ ಕಮಿಷನ್ ಕೇಳುತ್ತಿದ್ದಾರೆ ಎಂದು ಅಧಿಕಾರಿಗಳ ಸಮ್ಮುಖದಲ್ಲೇ ಸಂತ್ರಸ್ತ ರೈತರು ಆರೋಪಿಸಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ರು.
ಇದನ್ನೂ ಓದಿ:ಭಾರತದಲ್ಲಿ ಕೊರೊನಾ ಆ್ಯಕ್ಟಿವ್ ಕೇಸ್ಗಳ ಸಂಖ್ಯೆ 1.36 ಲಕ್ಷಕ್ಕೆ ಇಳಿಕೆ.. 79 ಲಕ್ಷ ಮಂದಿಗೆ ಲಸಿಕೆ