ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ನಿಚ್ಛಣಿಕೆ ಗ್ರಾಮಕ್ಕೆ ಸರಿಯಾದ ಬಸ್ ವ್ಯವಸ್ಥೆಯಿಲ್ಲದ ಹಿನ್ನೆಲೆಯಲ್ಲಿ ಓರ್ವ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಗ್ರಾಮಸ್ಥರು ಹಾಗೂ ಶಾಲೆ ಮಕ್ಕಳು ನಿಚ್ಛಣಿಕೆ ಗ್ರಾಮದಲ್ಲಿ ಬಸ್ ತಡೆಹಿಡಿದು ಪ್ರತಿಭಟನೆ ನಡೆಸಿದರು.
ಅಸಮರ್ಪಕ ಬಸ್ ವ್ಯವಸ್ಥೆಯಿಂದ ರೋಸಿ ಹೋಗಿ ವಿದ್ಯಾರ್ಥಿಗಳು ನಡೆದುಕೊಂಡು ಬರುವಾಗ ಮೂವರು ವಿದ್ಯಾರ್ಥಿಗಳಿಗೆ ವಾಹನವೊಂದು ಡಿಕ್ಕಿ ಹೊಡೆದಿತ್ತು. ಪರಿಣಾಮ ಕಿತ್ತೂರು ಸರ್ಕಾರಿ ಪ್ರೌಢಶಾಲೆಯ 8ನೇ ತರಗತಿಯ ಅಕ್ಕವ್ವ ಹೂಲಿಕಟ್ಟಿ ಮೃತಪಟ್ಟಿದ್ದರು. ಇನ್ನುಳಿದ ಇಬ್ಬರು ವಿದ್ಯಾರ್ಥಿಗಳಿಗೆ ಗಾಯವಾಗಿದ್ದು, ಅವರಿಗೆ ಬೆಳಗಾವಿ ನಗರದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮೃತ ವಿದ್ಯಾರ್ಥಿನಿ ಸಾವಿಗೆ ಕೆಎಸ್ಆರ್ಟಿಸಿ ಅಧಿಕಾರಿಗಳು ಕಾರಣ ಎಂದು ಆರೋಪಿಸಿ ನಿಚ್ಛಣಿಕೆ ಗ್ರಾಮಸ್ಥರು ರಸ್ತೆ ಮೇಲೆ ಕುಳಿತು ಬಸ್ ತಡೆಹಿಡಿದು ಪ್ರತಿಭಟನೆ ಮಾಡಿದರು.
ನಿಚ್ಛಣಿಕೆ ಗ್ರಾಮದಿಂದ ಕಿತ್ತೂರು ಪಟ್ಟಣಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೇ, ವಿದ್ಯಾರ್ಥಿಗಳು ಪ್ರಯಾಣಿಕರು ದಿನನಿತ್ಯ ಸಂಕಷ್ಟ ಪಡುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಮೃತ ವಿದ್ಯಾರ್ಥಿ ಅಕ್ಕವ್ವ ಹೂಲಿಕಟ್ಟಿ ಕಳೆದ ಐದಿನೈದು ದಿನದ ಹಿಂದೆ ಸ್ಥಳೀಯ ಶಾಸಕರಾದ ಮಹಾಂತೇಶ ದೊಡ್ಡಗೌಡರಗೆ ಗ್ರಾಮಕ್ಕೆ ಸರಿಯಾದ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಪತ್ರವನ್ನು ಸಲ್ಲಿಸಿದರು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಅಥಣಿಯಲ್ಲಿ ಕಾಲೇಜು ಬಸ್ಗೆ ಕ್ಯಾಂಟರ್ ಡಿಕ್ಕಿ.. ಚಾಲಕರಿಬ್ಬರೂ ಸಾವು, ಹಲವು ವಿದ್ಯಾರ್ಥಿಗಳ ಸ್ಥಿತಿ ಗಂಭೀರ
ಆದಷ್ಟು ಬೇಗನೆ ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಗ್ರಾಮಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಒಂದು ವೇಳೆ ಮೀನಮೇಷ ಮಾಡಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.