ಬೆಳಗಾವಿ : ಗಡಿ ಜಿಲ್ಲೆ ಬೆಳಗಾವಿಯಲ್ಲಿ ಡಿಸೆಂಬರ್ 4 ರಂದು ಬಿಜೆಪಿ ಕೋರ್ ಕಮಿಟಿ ಹಾಗೂ ಡಿ. 5ರಂದು ರಾಜ್ಯ ಕಾರ್ಯಕಾರಣಿ ಸಭೆ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಮಾಹಿತಿ ನೀಡಿದರು.
ನಗರದಲ್ಲಿ ಮಾತನಾಡಿದ ಅವರು, ಕೋರ್ ಕಮಿಟಿಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಿಟಿ ರವಿ, ಸಿಎಂ ಯಡಿಯೂರಪ್ಪ ಭಾಗಿಯಾಗಲಿದ್ದಾರೆ ಎಂದರು.
ರಾಜ್ಯದಲ್ಲಿ ನಡೆಯಲಿರುವ ಎರಡು ವಿಧಾನಸಭೆ ಹಾಗೂ ಒಂದು ಲೋಕಸಭೆ ಕ್ಷೇತ್ರದ ಉಪಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಯಲಿದೆ. ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಿ ಹೈಕಮಾಂಡಿಗೆ ಶಿಫಾರಸು ಮಾಡಲಾಗುವುದು. ಉಪಚುನಾವಣೆಗಳಲ್ಲಿ ಗೆಲ್ಲಲು ಮಾಡಬೇಕಾದ ಸಿದ್ಧತೆಗಳ ಬಗ್ಗೆಯೂ ಕೋರ್ ಕಮಿಟಿಯಲ್ಲಿ ಚರ್ಚೆ ನಡೆಯಲಿದೆ ಎಂದರು.
ಡಿಸೆಂಬರ್ 5ರಂದು ಬೆಳಗಾವಿಯ ಗಾಂಧಿಭವನದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆ ನಡೆಯಲಿದೆ. ಸಭೆಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಿಟಿ ರವಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್, ಸಿಎಂ ಯಡಿಯೂರಪ್ಪ ಭಾಗಿಯಾಗಲಿದ್ದಾರೆ.
ಗ್ರಾಮಪಂಚಾಯತ್ ಚುನಾವಣೆಯಲ್ಲಿ ಮೇಲುಗೈ ಸಾಧಿಸುವ ಸಂಬಂಧ ಸಭೆಯಲ್ಲಿ ಚರ್ಚೆ ನಡೆಯಲಿದೆ. ಸಭೆಯಲ್ಲಿ ಕೋರ್ ಕಮಿಟಿ, ರಾಷ್ಟ್ರೀಯ ಪದಾಧಿಕಾರಿಗಳು, ರಾಜ್ಯ ಪದಾಧಿಕಾರಿಗಳು, ಮೋರ್ಚಾಗಳ ಪದಾಧಿಕಾರಿಗಳು ಸೇರಿ 149 ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಕೊರೊನಾ ಹಿನ್ನೆಲೆ ವೆಬೆಕ್ಸ್ ಮೂಲಕ ಹಲವು ಮುಖಂಡರು ಭಾಗವಹಿಸಲಿದ್ದಾರೆ. ರಾಜ್ಯ ಕಾರ್ಯಕಾರಣಿ ಸದಸ್ಯರು, ಸಂಸದರು, ಶಾಸಕರು, ಜಿಲ್ಲಾಧ್ಯಕ್ಷರು ಸೇರಿ 434 ಜನರು ವೆಬೆಕ್ಸ್ ಮೂಲಕ ಭಾಗವಹಿಸಲಿದ್ದಾರೆ ಎಂದು ಸುರಾನಾ ಮಾಹಿತಿ ನೀಡಿದ್ದಾರೆ.