ಬೆಳಗಾವಿ: ನಾಳೆಯ ವೀಕೆಂಡ್ ಲಾಕ್ಡೌನ್ನಲ್ಲಿ ಅನಗತ್ಯವಾಗಿ ಓಡಾಡುವವರು ಸಿಕ್ಕಿಹಾಕಿಕೊಂಡ್ರೆ ಬೈಕ್ ಸೀಜ್ ಮಾಡುವುದಲ್ಲದೇ ಕರ್ನಾಟಕ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಸ್ ದಾಖಲಿಸುತ್ತೇವೆ ಎಂದು ಡಿಸಿಪಿ ಡಾ. ವಿಕ್ರಮ ಆಮಟೆ ಸಾರ್ವಜನಿಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೀಕೆಂಡ್ ಲಾಕ್ಡೌನ್ ಉದ್ದೇಶ ಕೋವಿಡ್ ಸೋಂಕು ತಡೆಗಟ್ಟುವ ಸಲುವಾಗಿ ಎಂಬುವುದು ಸಾರ್ವಜನಿಕರೂ ಅರ್ಥ ಮಾಡಿಕೊಳ್ಳಬೇಕು. ನಾಳೆ ಮತ್ತು ನಾಡಿದ್ದು ಯಾರು ಅನಗತ್ಯವಾಗಿ ರಸ್ತೆಗಳಿಗೆ ಬರುತ್ತಾರೋ ಅಂಥವರ ಬೈಕ್ ಸೀಜ್ ಮಾಡುವುದಲ್ಲದೇ ಕರ್ನಾಟಕ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಸ್ ದಾಖಲಿಸುತ್ತೇವೆ. 10 ಗಂಟೆ ನಂತರವೂ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಜನರು ಹೊರಗಡೆ ಬರುತ್ತಿದ್ದಾರೆ. ಕೊರೊನಾ ಪರಿಸ್ಥಿತಿಯನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು ಎಂದರು.
ಪ್ರತಿಯೊಂದು ವಾಹನ ಹಾಗೂ ಪ್ರತಿಯೊಂದು ಐಡಿ ಕಾರ್ಡ್ ಪರಿಶೀಲನೆ ಮಾಡುತ್ತೇವೆ. ಆಸ್ಪತ್ರೆ, ಹಾಲು, ದಿನಪತ್ರಿಕೆಗಳು, ಅಗತ್ಯ ಸಾಮಗ್ರಿ ಸಾಗಿಸುವ ಗೂಡ್ಸ್ ವಾಹನಗಳ ಓಡಾಟ, ಆನ್‌ಲೈನ್ ಫುಡ್ ಸರ್ವೀಸ್ ಹಾಗೂ ಪಡಿತರ ಕೊಳ್ಳುವವರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಅವ್ರೂ ಬಿಪಿಎಲ್ ಕಾರ್ಡ್ ತೋರಿಸಬೇಕು. ಸಾರ್ವಜನಿಕರು ಕೂಡ ಸರ್ಕಾರದ ಮಾರ್ಗಸೂಚಿ ಪಾಲಿಸುವಲ್ಲಿ ಕೈಜೋಡಿಸಬೇಕು. ಅಂದಾಗ ಮಾತ್ರ ಕೊರೊನಾ ಹೋಗಲಾಡಿಸಲು ಸಹಕಾರಿ ಆಗಲಿದೆ.
ಒಂದು ವೇಳೆ ನಾಳೆಯಿಂದ ನಕಲಿ ಐಡಿ ಕಾರ್ಡ್ ಹಿಡಿದುಕೊಂಡು ಓಡಾಡುವ ಬಗ್ಗೆ ಗಮನಕ್ಕೆ ಬಂದ್ರೆ ಅಂತವರ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ರೋಗ ಪ್ರತಿಬಂಧಕ ಕಾಯ್ದೆಯಡಿಯಲ್ಲಿ ಕೇಸ್ ದಾಖಲಿಸಿ ನ್ಯಾಯಾಲಯಕ್ಕೆ ಒಪ್ಪಿಸುತ್ತೇವೆ ಎಂದು ಡಿಸಿಪಿ ಡಾ. ವಿಕ್ರಮ್ ಆಮಟೆ ಖಡಕ್ ಎಚ್ಚರಿಕೆ ನೀಡಿದರು.