ಬೆಳಗಾವಿ: ಜಿಲ್ಲಾದ್ಯಂತ ಎರಡು ದಿನ ವೀಕೆಂಡ್ ಕಂಪ್ಲೀಟ್ ಲಾಕ್‌ಡೌನ್ ಇದ್ದರೂ, ಪೂಜೆ ಮಾಡಲು ಹೋಗುತ್ತಿದ್ದೇನೆ ಎಂದ ಜ್ಯೋತಿಷಿಯೊಬ್ಬರನ್ನು ಡಿಸಿಪಿ ಡಾ. ವಿಕ್ರಮ್ ಆಮಟೆ ತರಾಟೆಗೆ ತೆಗೆದುಕೊಂಡು ನಂತರ ಬಿಟ್ಟು ಕಳುಹಿಸಿದ ಘಟನೆ ನಡೆಯಿತು.
ವೀಕೆಂಡ್ ಕಂಪ್ಲೀಟ್ ಲಾಕ್‌ಡೌನ್ ಇರುವ ಕಾರಣಕ್ಕೆ ನಗರದ ಚೆನ್ನಮ್ಮ ವೃತ್ತದಲ್ಲಿ ಸ್ವತಃ ಡಿಸಿಪಿ ಡಾ. ವಿಕ್ರಮ್ ಆಮಟೆ ಅವರೇ ಫೀಲ್ಡಿಗಿಳಿದು ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ತುರ್ತು ಸೇವೆಗಳಿಗೆ ತೆರಳುತ್ತಿರುವವರಿಗೆ ಮಾತ್ರ ಅವಕಾಶ ನೀಡುತ್ತಿದ್ದರು.
ಅನಗತ್ಯವಾಗಿ ಓಡಾಡುವ ಜನರ ಬೈಕ್ಗಳನ್ನು ಸೀಜ್ ಮಾಡಿದರು. ಇದೇ ವೇಳೆ, ರಾಘವೇಂದ್ರ ಜ್ಯೋತಿಷ್ಯಾಲಯದ ಶ್ರೀನಿವಾಸ ಭಟ್ ಎಂಬುವವರ ಕಾರನ್ನು ತಡೆದು ಪೊಲೀಸರು ತಪಾಸಣೆ ನಡೆಸಿದರು. ಆಗ ಜ್ಯೋತಿಷಿ ನಾನು ಪೂಜೆ ಮಾಡಲು ಹೋಗಬೇಕು ಎಂದಿದ್ದಾರೆ. ಅದಕ್ಕೆ ಡಿಸಿಪಿ ಜ್ಯೋತಿಷಿಯನ್ನು ತರಾಟೆಗೆ ತೆಗೆದುಕೊಂಡು ಮತ್ತೊಮ್ಮೆ ಬರದಂತೆ ಎಚ್ಚರಿಕೆ ನೀಡಿ ಕಳುಹಿಸಿದರು.
ಇದನ್ನೂ ಓದಿ: ಹೊತ್ತಿ ಉರಿದ ಬೈಕ್ : ಪ್ರತಿಭಟನಾಕಾರರು ಚೆಲ್ಲಾಪಿಲ್ಲಿ
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಪಿ ಡಾ.ವಿಕ್ರಮ್ ಆಮಟೆ, ಹೆಚ್ಚುತ್ತಿರುವ ಕೊರೊನಾ ಚೈನ್ ಬ್ರೇಕ್ ಮಾಡಲು ವೀಕೆಂಡ್ ಕಂಪ್ಲೀಟ್ ಲಾಕ್‌ಡೌನ್ ಅನ್ನು ಜಿಲ್ಲಾಧಿಕಾರಿಗಳು ಘೋಷಣೆ ಮಾಡಿದ್ದಾರೆ. ಹೀಗಾಗಿ ವಿನಾಕಾರಣ ಯಾರೂ ಕೂಡ ಹೊರಗಡೆ ಓಡಾಡಬಾರದು ಎಂದು ಎಚ್ಚರಿಕೆ ನೀಡಿದರು.