ಅಥಣಿ(ಬೆಳಗಾವಿ): ತಾಲೂಕಿನಲ್ಲಿ ಕಳೆದ ರಾತ್ರಿಯಿಂದ ಸುರಿಯುತ್ತಿರುವ ವರ್ಷಧಾರೆಗೆ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜನ-ಜಾನುವಾರುಗಳು ಮೇವಿಲ್ಲದೆ ಪರಿತಪಿಸುತ್ತಿವೆ.
ಕಟಾವು ಮಾಡಿರುವ ಮೆಕ್ಕೆಜೋಳ ಮತ್ತು ಕಬ್ಬಿನ ತೋಟದಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ರೈತರು ನೀರಿನಲ್ಲಿ ಮುಳುಗಿದ್ದ ಕಬ್ಬನ್ನೇ ಹೊರ ತೆಗೆದು ಸಕ್ಕರೆ ಕಾರ್ಖಾನೆಗಳಿಗೆ ರವಾನಿಸುತ್ತಿದ್ದಾರೆ. ಕೊಯ್ಲಿಗೆ ಬಂದಿರುವ ಸಾವಿರಾರು ಹೆಕ್ಟೇರ್ ಗೋವಿನಜೋಳ ಹೊಲದಲ್ಲಿಯೇ ಕೊಳೆಯುತ್ತಿದೆ.
ಭಾರಿ ಮಳೆಗೆ ತಾಲೂಕಿನ ಹಲವಾರು ಕೆರೆಗಳು ಭರ್ತಿಯಾಗಿವೆ. ಹಳ್ಳ-ಕೊಳ್ಳಗಳು ತುಂಬಿವೆ. ಕೃಷ್ಣಾ ನದಿ ನೀರಿನ ಮಟ್ಟದಲ್ಲೂ ಹೆಚ್ಚಳವಾಗುತ್ತಿದೆ.
ವಿಜಯಪುರ ಜಿಲ್ಲೆಯಲ್ಲಿ ಮುಂಬರುವ ಎರಡು ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿ ರೆಡ್ ಅಲರ್ಟ್ ಘೋಷಿಸಿದೆ.
ವಿಜಯಪುರ ಜಿಲ್ಲೆಯ ಗಡಿಯಲ್ಲಿರುವ ಅಥಣಿಯಲ್ಲೂ ತಾಲೂಕು ಆಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.