ಬೆಳಗಾವಿ : ಕೊರೊನಾ 2ನೇ ಅಲೆ ತಡೆಗೆ ಸರ್ಕಾರ ಲಾಕ್‌ಡೌನ್ ವಿಸ್ತರಿಸಿದೆ. ಇದರ ಭಾರೀ ಹೊಡೆತ ರೈತರ ಮೇಲೆ ಬಿದ್ದಿದೆ. ತರಕಾರಿ ಬೆಳೆದಿದ್ದ ರೈತರಿಗೆ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆ ಸಿಗುತ್ತಿಲ್ಲ. ಸಮಯದ ಕೊರತೆಯಿಂದಾಗಿ ದರ ಕುಸಿತ ಕಂಡಿದೆ. ಪರಿಣಾಮ ಜಿಲ್ಲೆಯ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಳಗಾವಿ ಎಪಿಎಂಸಿ ಸುಮಾರು 80 ಎಕರೆಯಷ್ಟು ವಿಶಾಲವಾಗಿದೆ. ಅದರಲ್ಲಿ 20 ಎಕರೆ ತರಕಾರಿ ಮಾರುಕಟ್ಟೆಗೆ ಮೀಸಲಿಡಲಾಗಿದೆ. ಇಲ್ಲಿಂದ ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಇತರೆ ಹೊರ ರಾಜ್ಯಗಳಿಗೆ ದೊಡ್ಡ ಪ್ರಮಾಣದಲ್ಲಿ ತರಕಾರಿ ಮಾರಾಟವಾಗುತ್ತದೆ.
ಸದ್ಯ ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ತಡೆಗೆ ಲಾಕ್‌ಡೌನ್ ಜಾರಿಯಲ್ಲಿದೆ. ಹೀಗಾಗಿ, ಜಿಲ್ಲಾಡಳಿತ ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಎಪಿಎಂಸಿ ಮಾರುಕಟ್ಟೆಯನ್ನು ಮೂರು ಭಾಗಗಳಾಗಿ ವಿಂಗಡಿಸಿದೆ.
ಇದರಿಂದ ರೈತರು ಸರ್ಕಾರ ನಿಗದಿ ಪಡಿಸಿದ ಸಮಯದೊಳಗೆ ಪ್ರತಿನಿತ್ಯ ಮಾರುಕಟ್ಟೆಗೆ ತರಕಾರಿ ತಂದು ಮಾರಾಟ ಮಾಡಲು ತೊಂದರೆ ಆಗುತ್ತಿದೆ. ಒಂದು ವೇಳೆ ರೈತರು ತರಕಾರಿ ತಂದರೂ ಸೂಕ್ತ ದರ ಸಿಗದೆ ಕಂಗಾಲಾಗುತ್ತಿದ್ದಾರೆ.
ತಂದಿರುವ ಎಲ್ಲ ತರಕಾರಿ ಬೆಳೆಗಳು ಸಹ ಖರೀದಿಯಾಗುತ್ತಿಲ್ಲ ಎಂಬ ಕಾರಣಕ್ಕೆ ವರ್ತಕರು ಕೂಡ ರೈತರಿಗೆ ಉತ್ತಮ ದರ ನೀಡುತ್ತಿಲ್ಲ. ಪರಿಣಾಮ, ರೈತರು ಬಂದಷ್ಟು ಹಣ ಪಡೆದು ವಾಪಸ್ ತೆರಳುವಂತಾಗಿದೆ. ಇಲ್ಲವೇ ರಸ್ತೆಯಲ್ಲಿಯೇ ತರಕಾರಿ ಚೆಲ್ಲುವ ಸ್ಥಿತಿ ನಿರ್ಮಾಣವಾಗಿದೆ.
ನೆಲಕಚ್ಚಿದ ತರಕಾರಿ ಬೆಲೆ : ಜಿಲ್ಲೆಯ ಬೈಲಹೊಂಗಲ, ಕಿತ್ತೂರು, ಸವದತ್ತಿ, ಖಾನಾಪೂರ ಹಾಗೂ ರಾಮದುರ್ಗ ಸೇರಿ ಜಿಲ್ಲೆಯ ಇತರೆ ತಾಲೂಕಿನಲ್ಲೂ ಮೆಣಸಿನಕಾಯಿ, ಕ್ಯಾಪ್ಸಿಕಮ್, ಟೊಮ್ಯಾಟೊ ಸೇರಿ ಇತರೆ ತರಕಾರಿ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಾರೆ.
ಆದ್ರೆ, ಸದ್ಯದ ಸ್ಥಿತಿಯಲ್ಲಿ ರೈತರು ಬೆಳೆದ ವಿವಿಧ ಬಗೆಯ ತರಕಾರಿಗಳ ದರ ಕುಸಿತವಾಗಿದೆ. ಇದಕ್ಕೆ ಮೂಲ ಕಾರಣ ಲಾಕ್‌ಡೌನ್ ಎಫೆಕ್ಟ್ ಹಾಗೂ ಮೊದಲಿನಂತೆ ದೊಡ್ಡ ಮಟ್ಟದಲ್ಲಿ ವ್ಯಾಪಾರ ಆಗುತ್ತಿಲ್ಲ. ಪರಿಣಾಮ ರೈತರು ಲಕ್ಷಾಂತರ ರೂಪಾಯಿ ಸಾಲಸೋಲ ಮಾಡಿ ಸಾಕಷ್ಟು ಶ್ರಮ ಹಾಕಿ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದಂತಾಗಿದೆ.
ನಗರ ಪ್ರದೇಶದಲ್ಲಿ ದುಪ್ಪಟ್ಟು ಬೆಲೆಗೆ ತರಕಾರಿ ಮಾರಾಟ : ಲಾಕ್‌ಡೌನ್‌ನಿಂದಾಗಿ ನಿತ್ಯ ಅವಶ್ಯಕ ವಸ್ತುಗಳ ಖರೀದಿಗೆ ಕಡಿಮೆ ಸಮಯ ನಿಗದಿಪಡಿಸಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಚಿಲ್ಲರೆ ವ್ಯಾಪಾರಿಗಳು, ರೈತರಿಂದ ಕಡಿಮೆ ಬೆಲೆಗೆ ತರಕಾರಿ ಖರೀದಿಸುತ್ತಿದ್ದಾರೆ. ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿಕೊಳ್ಳುವ ಮೂಲಕ ನಾಲ್ಕು ಗಂಟೆಗಳ ಅವಧಿಯಲ್ಲಿಯೇ ಬಂದಷ್ಟು ಹಣ ಮಾಡಿಕೊಳ್ಳುವ ಯೋಚನೆಯಲ್ಲಿ ಚಿಲ್ಲರೆ ವ್ಯಾಪಾರಿಗಳಿದ್ದಾರೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ಕೊರೊನಾ ಕೇರ್ ಸೆಂಟರ್ಗೆ ಒತ್ತು.. ಸೋಂಕು ಲಕ್ಷಣ ಇಲ್ಲದವರಿಗೂ ಸೂಕ್ತ ಚಿಕಿತ್ಸೆ
ಇತ್ತ ರೈತರು ಗಾಳಿ, ಮಳೆ, ಬಿಸಿಲನ್ನು ಸಹ ಲೆಕ್ಕಿಸದೇ ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆ ಇಲ್ಲದೇ ಜಮೀನುಗಳಲ್ಲೇ ನಾಶವಾಗುತ್ತಿದೆ. ಆದ್ರೆ, ನಗರದಲ್ಲಿ ಚಿಲ್ಲರೆ ವ್ಯಾಪಾರಿಗಳು ಮಾತ್ರ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ.
ರೈತರಿಗೆ ಸಿಗದ ಸೂಕ್ತ ಬೆಲೆ ಮಧ್ಯವರ್ತಿಗಳು ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ ಸಿಗುತ್ತಿದೆ. ಬೆಳೆದ ಬೆಳೆಗೆ ಬೆಲೆ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಕೆಲ ರೈತರು ತರಕಾರಿಗಳನ್ನು ರಸ್ತೆ ಬದಿ ಸುರಿಯುತ್ತಿದ್ದಾರೆ. ಕೆಲ ರೈತರು ಬೆಳೆ ಕಟಾವು ಮಾಡದೆ ಹಾಗೇಯೇ ಜಮೀನಿನಲ್ಲಿ ಬಿಡುತ್ತಿದ್ದಾರೆ.
ಗೋವಾ ಮಾರುಕಟ್ಟೆಗೆ ದೊಡ್ಡ ಮಟ್ಟದಲ್ಲಿ ಸರಬರಾಜು ಇಲ್ಲ: ಬೆಳಗಾವಿ ಎಪಿಎಂಸಿ ಮಾರುಕಟ್ಟೆಯಿಂದ ಗೋವಾವೊಂದಕ್ಕೆ ದಿನಕ್ಕೆ 40ಕ್ಕೂ ಹೆಚ್ಚು ಮೆಣಸಿನಕಾಯಿ ಲಾರಿಗಳು ಹೋಗುತ್ತಿದ್ದವು. ಇದೀಗ ಕೊರೊನಾ ತಡೆಗೆ ಲಾಕ್‌ಡೌನ್ ಜಾರಿಯಿಂದಾಗಿ ಕೇವಲ 7 ರಿಂದ 8 ಮೆಣಸಿನಕಾಯಿ ಲಾರಿಗಳು ಹೋಗುತ್ತವೆ.
ಇದಲ್ಲದೇ ಇತರೆ ತರಕಾರಿ ಬೆಳೆಗಳು ಗೋವಾ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶಕ್ಕೆ ದೊಡ್ಡ ಪ್ರಮಾಣದಲ್ಲಿ ಸರಬರಾಜು ಆಗುತ್ತಿತ್ತು. ಆದರೀಗ ಅತೀ ಕಡಿಮೆ ಪ್ರಮಾಣದಲ್ಲಿ ತರಕಾರಿ ಸರಬರಾಜು ಆಗುತ್ತಿದೆ. ಹೀಗಾಗಿ, ರೈತರ ಬೆಳೆಗಳಿಗೆ ದೊಡ್ಡ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ದರ ಕುಸಿತವಾಗಿದೆ ಎನ್ನುತ್ತಾರೆ ಎಪಿಎಂಸಿ ವರ್ತಕರು.
ಮದುವೆ, ಸಭೆ-ಸಮಾರಂಭಗಳಿಲ್ಲದೇ ರೈತರಿಗೆ ಹೊಡೆತ : ಕಳೆದ ವರ್ಷ ಕೋವಿಡ್ ಮೊದಲನೇ ಅಲೆ ಬಂದಾಗ ಲಾಕ್‌ಡೌನ್ ಸಮಯದಲ್ಲೂ ರಾಜ್ಯದ ತರಕಾರಿ ಬೆಳೆಗಾರರು ಭಾರೀ ನಷ್ಟ ಅನುಭವಿಸಿದ್ದರು. ಇದೀಗ ಮತ್ತೊಮ್ಮೆ ಮದುವೆ, ಸಭೆ ಸಮಾರಂಭಗಳಲ್ಲಿ ಸೀಮಿತ ಪ್ರಮಾಣದಲ್ಲಿ ಅತಿಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಜಾತ್ರೆಗಳು, ಹಬ್ಬ-ಹರಿದಿನಗಳನ್ನು ಸಾರ್ವಜನಿಕವಾಗಿ ಆಚರಿಸಲು ನಿರ್ಬಂಧ ಹೇರಲಾಗಿದೆ. ಇದರಿಂದಲೂ ರೈತರು ಬೆಳೆದ ಬೆಳೆಗಳ ಮಾರಾಟಕ್ಕೆ ಉತ್ತಮ ಮಾರುಕಟ್ಟೆ ಇಲ್ಲದಂತಾಗಿದೆ. ಹಾಗಾಗಿ, ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ಎಪಿಎಂಸಿ ಮಾರುಕಟ್ಟೆಯ ಮೊದಲಿದ್ದ ಸ್ಥಳದಲ್ಲಿಯೇ ಮಾರಾಟಕ್ಕೆ ಅವಕಾಶ ನೀಡಬೇಕು ಎಂಬುದು ವರ್ತಕರ ಒತ್ತಾಯವಾಗಿದೆ.