ಅಥಣಿ (ಬೆಳಗಾವಿ) : ಜಾರ್ಖಂಡ್ನಿಂದ ತಾಲೂಕಿಗೆ ಬಂದಿದ್ದವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಆದರೆ ವರದಿ ಬರುವ ಮುನ್ನವೇ ಅವರನ್ನು ಬಿಡುಗಡೆ ಮಾಡಿದ್ದು, ಈ ಪೈಕಿ ಇಂದು 12 ಜನರ ವರದಿ ಪಾಸಿಟಿವ್ ಬಂದಿದೆ.
ಲಾಕ್ಡೌನ್ ಸಡಿಲಿಕೆಯಾದ ಪರಿಣಾಮ ಮೇ 6 ರಂದು ಜಾರ್ಖಂಡ್ನಿಂದ 44 ಜನರು ಅಥಣಿಗೆ ಬಂದಿದ್ದರು. ಇವರನ್ನು ಮೇ 20 ರ ವರೆಗೆ 14 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗಿತ್ತು. ಇವರ ಪರೀಕ್ಷಾ ವರದಿ ಇನ್ನು ಬಂದಿರಲಿಲ್ಲ.
ಇವರಲ್ಲಿ ರೋಗದ ಯಾವುದೇ ಲಕ್ಷಣಗಳು ಕಂಡು ಬರದ ಹಿನ್ನೆಲೆಯಲ್ಲಿ ಇವರೆಲ್ಲರನ್ನು ಮನೆಗೆ ಕಳುಹಿಸಲಾಗಿತ್ತು. ಈ ಪೈಕಿ ಇಂದು 12 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದ ಎಚ್ಚೆತ್ತ ಆರೋಗ್ಯಾಧಿಕಾರಿಗಳು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸೋಂಕಿತರ ಮಾಹಿತಿ:
- ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮದ - 8
- ನಂದಗಾಂವ- 3
- ಝುಂಜರವಾಡ- 1
ಈ ಗ್ರಾಮಗಳಿಂದ ಒಟ್ಟು 12 ಪ್ರಕರಣಗಳು ಪತ್ತೆಯಾಗಿದ್ದು, ಮೇ 20 ಕ್ಕೆ ಊರಿಗೆ ತೆರಳಿದ ಬಳಿಕ ಇವರು ತಾಲೂಕಿನಾದ್ಯಂತ ಓಡಾಟ ನಡೆಸಿದ್ದಾರೆಂದು ಹೇಳಲಾಗಿದೆ. ವಿಷಯ ತಿಳಿದು ಅಕ್ಕಪಕ್ಕದ ಜನತೆ ಆತಂಕಗೊಂಡಿದ್ದು, ಈ ವಿಷಯದಲ್ಲಿ ಬೇಜವಾಬ್ದಾರಿ ತೋರಿದ ತಹಶೀಲ್ದಾರರ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.