ಬೆಳಗಾವಿ: ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಗೆದ್ದಿರುವ ಕಾಂಗ್ರೆಸ್ ಪಕ್ಷ ಬೆಳಗಾವಿ ಜಿಲ್ಲೆಯಲ್ಲೂ ಅತೀ ಹೆಚ್ಚು ಸ್ಥಾನಗಳನ್ನು ಗೆದ್ದು ಬೀಗಿದೆ. ಈ ಮೂಲಕ ಆಡಳಿತಾರೂಢ ಬಿಜೆಪಿಗೆ ತೀವ್ರ ಮುಖಭಂಗ ಆದಂತಾಗಿದೆ. ಹೌದು, ಬೆಳಗಾವಿ ಜಿಲ್ಲೆಯಲ್ಲಿ ಯಾವ ಪಕ್ಷ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆಯೋ ಆ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ. ಜಿಲ್ಲೆಯ 18 ವಿಧಾನಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 11 ಸ್ಥಾನಗಳಲ್ಲಿ ಗೆದ್ದರೆ, ಬಿಜೆಪಿ 7 ಸ್ಥಾನಗಳಲ್ಲಿ ಮಾತ್ರ ಜಯ ಸಾಧಿಸಿದೆ. ಕಳೆದ ಬಾರಿ ಬಿಜೆಪಿ 13 ಸ್ಥಾನಗಳಲ್ಲಿ ಗೆದ್ದಿತ್ತು. ಆದರೆ ಈ ಬಾರಿ ಹಿನ್ನಡೆ ಅನುಭವಿಸಿರುವುದು ಬಿಜೆಪಿಗೆ ದೊಡ್ಡ ಆಘಾತವಾಗಿದೆ.
ಗೆದ್ದ ಅಭ್ಯರ್ಥಿಗಳ ವಿವರ:
- ನಿಪ್ಪಾಣಿ: ಶಶಿಕಲಾ ಜೊಲ್ಲೆ-ಬಿಜೆಪಿ
- ಚಿಕ್ಕೋಡಿ: ಗಣೇಶ ಹುಕ್ಕೇರಿ-ಕಾಂಗ್ರೆಸ್
- ಅಥಣಿ-ಲಕ್ಷ್ಮಣ ಸವದಿ-ಕಾಂಗ್ರೆಸ್
- ಕಾಗವಾಡ: ರಾಜು ಕಾಗೆ-ಕಾಂಗ್ರೆಸ್
- ಕುಡಚಿ: ಮಹೇಂದ್ರ ತಮ್ಮಣ್ಣವರ-ಕಾಂಗ್ರೆಸ್
- ರಾಯಬಾಗ: ದುರ್ಯೋಧನ ಐಹೊಳೆ-ಬಿಜೆಪಿ
- ಹುಕ್ಕೇರಿ: ನಿಖಿಲ್ ಕತ್ತಿ-ಬಿಜೆಪಿ
- ಅರಭಾವಿ: ಬಾಲಚಂದ್ರ ಜಾರಕಿಹೊಳಿ-ಬಿಜೆಪಿ
- ಗೋಕಾಕ್: ರಮೇಶ್ ಜಾರಕಿಹೊಳಿ-ಬಿಜೆಪಿ
- ಯಮಕನಮರಡಿ: ಸತೀಶ್ ಜಾರಕಿಹೊಳಿ-ಕಾಂಗ್ರೆಸ್
- ಬೆಳಗಾವಿ ಉತ್ತರ: ಆಸೀಫ್(ರಾಜು) ಸೇಠ್-ಕಾಂಗ್ರೆಸ್
- ಬೆಳಗಾವಿ ದಕ್ಷಿಣ: ಅಭಯ ಪಾಟೀಲ-ಬಿಜೆಪಿ
- ಬೆಳಗಾವಿ ಗ್ರಾಮೀಣ: ಲಕ್ಷ್ಮೀ ಹೆಬ್ಬಾಳ್ಕರ್-ಕಾಂಗ್ರೆಸ್
- ಖಾನಾಪುರ: ವಿಠಲ ಹಲಗೇಕರ್-ಬಿಜೆಪಿ
- ಕಿತ್ತೂರು: ಬಾಬಾಸಾಹೇಬ ಪಾಟೀಲ್-ಕಾಂಗ್ರೆಸ್
- ಬೈಲಹೊಂಗಲ: ಮಹಾಂತೇಶ ಕೌಜಲಗಿ-ಕಾಂಗ್ರೆಸ್
- ರಾಮದುರ್ಗ: ಅಶೋಕ ಪಟ್ಟಣ-ಕಾಂಗ್ರೆಸ್
- ಸವದತ್ತಿ: ವಿಶ್ವಾಸ ವೈದ್ಯ-ಕಾಂಗ್ರೆಸ್
ರಮೇಶ್ ಜಾರಕಿಹೊಳಿ ಆಪ್ತರಿಗೆ ಸೋಲು: ಹಠಕ್ಕೆ ಬಿದ್ದು ತನ್ನ ಆಪ್ತರಿಗೆ ಟಿಕೆಟ್ ಕೊಡಿಸಿದ್ದ ರಮೇಶ್ ಜಾರಕಿಹೊಳಿಗೆ ತೀವ್ರ ಮುಖಭಂಗವಾಗಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹೇಗಾದ್ರೂ ಮಾಡಿ ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಸಲೇಬೇಕೆಂದು ಪಣ ತೊಟ್ಟಿದ್ದ ಗೋಕಾಕ್ ಸಾಹುಕಾರಗೆ ಲಕ್ಷ್ಮೀ ಹೆಬ್ಬಾಳ್ಕರ್ ಭರ್ಜರಿ ಜಯ ಸಾಧಿಸುವ ಮೂಲಕ ತಿರುಗೇಟು ಕೊಟ್ಟಿದ್ದಾರೆ. ರಮೇಶ ಜಾರಕಿಹೊಳಿ ಟಿಕೆಟ್ ಕೊಡಿಸಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದ ನಾಗೇಶ ಮನ್ನೋಳ್ಕರ್, ಅಥಣಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಹೇಶ ಕುಮಠಳ್ಳಿ, ರಾಮದುರ್ಗ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಚಿಕ್ಕರೇವಣ್ಣ ಹೀನಾಯವಾಗಿ ಸೋತಿದ್ದಾರೆ.
ವರ್ಕೌಟ್ ಆಗದ ಮೋದಿ, ಶಾ ರ್ಯಾಲಿ: ರಾಜ್ಯದಲ್ಲೇ ಎರಡನೇ ಅತೀ ಹೆಚ್ಚು ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಟಾರ್ಗೆಟ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಜಿಲ್ಲೆಗೆ ಮೂರು ಬಾರಿ ಆಗಮಿಸಿ ಮತಬೇಟೆ ನಡೆಸಿದ್ದರು. ಅಲ್ಲದೇ ಅಮಿತ್ ಶಾ ಕೂಡ ಆಗಮಿಸಿ ತಮ್ಮ ಅಭ್ಯರ್ಥಿಗಳ ಪರ ಭರ್ಜರಿ ಕ್ಯಾಂಪೇನ್ ಮಾಡಿದ್ದರು. ಆದರೆ ಇವರ ಮಾತಿಗೆ ಮರುಳಾಗದ ಜಿಲ್ಲೆಯ ಜನ ಕಾಂಗ್ರೆಸ್ಗೆ ಮಣೆ ಹಾಕಿದ್ದಾರೆ. ಮೋದಿ ಸಮಾವೇಶ ಮಾಡಿದ್ದ ಕುಡಚಿ, ಬೈಲಹೊಂಗಲದಲ್ಲೆ ಬಿಜೆಪಿ ಮಕಾಡೆ ಮಲಗಿದೆ.
ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ವಿರುದ್ಧ ಭಾರೀ ಅಂತರದಿಂದ ಗೆದ್ದಿದ್ದಾರೆ. ಲಕ್ಷ್ಮಣ ಸವದಿ ಸೋಲಿಸಲು ಅಥಣಿಯಲ್ಲೆ ಠಿಕಾಣಿ ಹೂಡಿ, ಟೀಕಾಪ್ರಹಾರ ನಡೆಸಿದ್ದ ರಮೇಶ ಜಾರಕಿಹೊಳಿ ಗೇಮ್ ಪ್ಲಾನ್ ವರ್ಕೌಟ್ ಆಗಿಲ್ಲ. ತಮ್ಮ ಗೆಲುವು ಖಚಿತ ಆಗುತ್ತಿದ್ದಂತೆ ಮತ ಏಣಿಕೆ ನಡೆಯುತ್ತಿದ್ದ ರಾಣಿ ಪಾರ್ವತಿದೇವಿ ಕಾಲೇಜಿನ ಆವರಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಲಕ್ಷ್ಮಣ ಸವದಿ, ಬಿಜೆಪಿಯಲ್ಲಿ ಪಕ್ಷದಿಂದ ಹೊರಗೆ ಹೋಗುವ ವಾತಾವರಣದಲ್ಲಿ ಕಾಂಗ್ರೆಸ್ ಪ್ರೀತಿಯಿಂದ ಬರಮಾಡಿಕೊಂಡು ನನ್ನ ಗೆಲುವಿಗೆ ಶ್ರಮಿಸಿದ್ದಾರೆ ಎಂದರು.
ಬಿಜೆಪಿಯವರು ನನ್ನ ನಡೆಸಿಕೊಂಡ ರೀತಿಯ ಬಗ್ಗೆ ಪ್ರತಿಕ್ರಿಸುವುದಿಲ್ಲ. ನನ್ನ ಕ್ಷೇತ್ರದ ಜನರು ನನಗೆ ಮತದಾನ ಮಾಡುವ ಮೂಲಕ ಬಿಜೆಪಿಗೆ ತಕ್ಕ ಉತ್ತರ ನೀಡಿದ್ದಾರೆ. ಮೊದಲಿಗೆ ಕ್ಷೇತ್ರದ ಜನರಿಗೆ ಹಾಗೂ ಕಾಂಗ್ರೆಸ್ ಮುಖಂಡರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ. ಕಾಗವಾಡ ಹಾಗೂ ಕುಡುಚಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ನೀಡಿದ್ದರು. ಅಲ್ಲಿನ ಜನ ಕಾಂಗ್ರೆಸ್ ಗೆ ಆಶೀರ್ವಾದ ಮಾಡಿದ್ದಾರೆ ಎಂದ ಸವದಿ, ರಮೇಶ ಜಾರಕಿಹೊಳಿ ಆಪ್ತರು ಸೋತಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ರಾಂಗ್ ಅಡ್ರೆಸ್ ಗೆ ಪತ್ರ ಬರೆಯುವುದು ಬೇಡ ಅವರನ್ನೆ ಕೇಳಿಕೊಳ್ಳಿ ಎಂದು ಹೇಳಿದರು.
ಗ್ರಾಮೀಣ ಕ್ಷೇತ್ರದಲ್ಲಿ 2ನೇ ಬಾರಿ ಹೆಬ್ಬಾಳ್ಕರ್ ಭರ್ಜರಿ ಗೆಲುವು: ರಮೇಶ್ ಜಾರಕಿಹೊಳಿ ತೀವ್ರ ವಿರೋಧಕ್ಕೂ ಜಗ್ಗದೇ ಕುಗ್ಗದೇ ವಿಜಯಪತಾಕೆ ಹಾರಿಸುವಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಯಶಸ್ವಿಯಾಗಿದ್ದಾರೆ. ಕಳೆದ ಬಾರಿಗಿಂತ ಅತೀ ಹೆಚ್ಚು ಮತಗಳನ್ನು ಪಡೆದು ಗೆದ್ದಿರುವ ಹೆಬ್ಬಾಳ್ಕರ್ ವಿರೋಧಿಗಳಿಗೆ ಟಕ್ಕರ್ ಕೊಟ್ಟಿದ್ದಾರೆ. ಗೆಲುವಿನ ವಿಶ್ವಾಸದಲ್ಲಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಮಾಧ್ಯಮಗಳ ಜೊತೆಗೆ ಮಾತನಾಡಿ, 2ನೇ ಬಾರಿ ಗೆಲ್ಲಿಸುವ ಮೂಲಕ ಮತದಾರರು ನನ್ನ ಮರ್ಯಾದೆ ಉಳಿಸಿದ್ದಾರೆ. ಜನರ ಭರವಸೆಯನ್ನು ನಾವು ಯಾವತ್ತೂ ಪೂರೈಸುತ್ತೇನೆ. ಇಡೀ ಜಿಲ್ಲೆಯಲ್ಲಿ 1 ಲಕ್ಷ 8 ಸಾವಿರ ಮತಗಳನ್ನು ಮತಗಳನ್ನು ಪಡೆದಿದ್ದೇನೆ. ಮೊದಲ ದಿನದಿಂದಲೂ ನನ್ನ ಗೆಲುವು ಖಚಿತ ಎಂದು ಹೇಳಿಕೊಂಡು ಬಂದಿದ್ದೇನೆ ಎಂದರು.
ಕಳೆದ ಬಾರಿಗಿಂತ ಒಂದು ಮತವಾದ್ರೂ ಹೆಚ್ಚಿಗೆ ಮತ ಪಡೆದು ಗೆಲ್ಲುತ್ತೇನೆ ಎಂದು ಹೇಳಿದ್ದೆ. ಅದೇ ರೀತಿ 8 ಸಾವಿರ ಹೆಚ್ಚು ಮತ ಪಡೆದು ಗೆದ್ದಿದ್ದೇನೆ. ನಾನು ಮಾಡಿರುವ ಕೆಲಸ ಮತ್ತು ನಾನು ಅವರ ಮೇಲೆ ಇಟ್ಟಿರುವ ಪ್ರೀತಿಗೆ ಫಲ ಸಿಕ್ಕಿದೆ. ರಾಜ್ಯದಲ್ಲಿ ಕಾಂಗ್ರೆಸ್ಗೆ ಬಹುಮತ ವಿಚಾರವಾಗಿ ಮಾತನಾಡಿ, ರಾಜ್ಯದ ಮಹಾಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. 40 ಪರ್ಸೆಂಟ್ ಸರ್ಕಾರ, ಬೆಲೆ ಏರಿಕೆ, ಕೊರೊನಾದಲ್ಲಿ ಮತ್ತು ಪ್ರವಾಹದಲ್ಲಿ ಮಾಡಿದ್ದ ಇವರ ಅವಾಂತರಕ್ಕೆ ಬೇಸತ್ತ ರಾಜ್ಯದ ಜನ ಕಾಂಗ್ರೆಸ್ಗೆ ಮತ ನೀಡಿ ಹೊಸತನ ಬಯಸಿದ್ದಾರೆ. ನಾವು ನೀಡಿರುವ ಐದು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ. ಜನರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸ ಈಡೇರಿಸುತ್ತೇವೆ ಎಂದು ಹೇಳಿದರು.
ಕಿತ್ತೂರಿನಲ್ಲಿ ಬಾಬಾಸಾಹೇಬ ಪಾಟೀಲ ಗೆಲುವು: ತೀವ್ರ ಜಿದ್ದಾಜಿದ್ದಿನ ಕಣವಾಗಿದ್ದ ಕಿತ್ತೂರು ಮತಕ್ಷೇತ್ರದಲ್ಲಿ ಕಳೆದ ಬಾರಿ ಪಕ್ಷೇತರವಾಗಿ ಸ್ಪರ್ಧಿಸಿ ಸೋತಿದ್ದ ಬಾಬಾಸಾಹೇಬ ಪಾಟೀಲ ಈ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕ ಮಹಾಂತೇಶ ದೊಡ್ಡಗೌಡರ ಪರಾಭವಗೊಂಡಿದ್ದಾರೆ. ಗೆದ್ದ ಖುಷಿಯಲ್ಲಿದ್ದ ಬಾಬಾಸಾಹೇಬ ಪಾಟೀಲ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಜನ ನಮ್ಮ ಮೇಲೆ ವಿಶ್ವಾಸವಿಟ್ಟು ಮತ ಹಾಕಿ ಗೆಲ್ಲಿಸಿದ್ದಾರೆ. ಅವರ ವಿಶ್ವಾಸ ಉಳಿಸಿಕೊಂಡು ಹೋಗುತ್ತೇವೆ. ನಿರೀಕ್ಷೆಯಂತೆ ಮತಗಳು ಬಂದಿದ್ದು, ಮತಕ್ಷೇತ್ರದ ಎಲ್ಲ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಪಿ. ರಾಜೀವ ಸೋಲಿಸಿದ ಮಹೇಂದ್ರ ತಮ್ಮಣ್ಣವರ: ಎರಡು ಬಾರಿ ಕುಡಚಿ ಕ್ಷೇತ್ರದಿಂದ ಗೆದ್ದಿದ್ದ ಪಿ.ರಾಜೀವಗೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಮಹೇಂದ್ರ ತಮ್ಮಣ್ಣವರ ಸೋಲಿನ ರುಚಿ ತೋರಿಸಿದ್ದಾರೆ. ಮಹೇಂದ್ರ ಮಾಧ್ಯಮಗಳ ಜೊತೆಗೆ ಮಾತನಾಡಿ, ಧರ್ಮ, ಅಧರ್ಮದ ನಡುವೆ ನಡೆದ ಚನಾವಣೆಯಲ್ಲಿ ಕುಡುಚಿ ಮತಕ್ಷೇತ್ರದ ಜನರು ನನಗೆ ಪ್ರಚಂಡ ಬಹುಮತದಿಂದ ಗೆಲ್ಲಿಸಿದ್ದಾರೆ. ಅವರ ಆಶೋತ್ತರಗಳನ್ನು ಈಡೇರಿಸುವ ಕೆಲಸ ಮಾಡುತ್ತೇನೆ. ಜಾತಿ, ಜಾತಿ ನಡುವೆ ಜಗಳ, 40 ಪರ್ಸೆಂಟ್ ಹಗರಣ, ಬೆಲೆ ಏರಿಕೆ, ಪಿಎಸ್ಐ ನೇಮಕಾತಿ ಹಗರಣದಿಂದ ಜನ ಬದಲಾವಣೆ ಬಯಸಿದ್ದಾರೆ. ಈ ಬಾರಿ ಕುಡುಚಿಯಲ್ಲಿ ಜನ ಬದಲಾವಣೆ ಬಯಸಿ ಗೆಲ್ಲಿಸಿದ್ದಾರೆ. ನಾನು ಮಾತಿಗಿಂತ ಕೃತಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತೇನೆ ಎಂದರು.
ಮತ್ತೆ ಗೆದ್ದ ಅಭಯ ಪಾಟೀಲ: ಈ ಬಾರಿ ಬೆಳಗಾವಿ ದಕ್ಷಿಣದಲ್ಲಿ ಅಭಯ ಪಾಟೀಲ ಸೋಲುತ್ತಾರೆ ಅಂತಾನೇ ಹೇಳಲಾಗಿತ್ತು. ಆದರೆ ಎಲ್ಲಾ ಸಮೀಕ್ಷೆ ಹುಸಿ ಮಾಡಿರುವ ಅಭಯ ಮತ್ತೆ ಗೆದ್ದು ಬೀಗಿದ್ದಾರೆ. ಅಭಯ ಪಾಟೀಲ ಮಾತನಾಡಿ, ಕ್ಷೇತ್ರದ ಜನ ನನ್ನ ಅಭಿವೃದ್ಧಿ ಕೆಲಸ ನೋಡಿ ವೋಟ್ ಹಾಕಿದ್ದಾರೆ. ಕ್ಷೇತ್ರದ ಜನರು ಮನೆ ಮಗ ಎಂದು ವೋಟ್ ಮಾಡಿದ್ದಾರೆ. ಎಲ್ಲರೂ ಕೂಡಿ ಅಭಯ ಪಾಟೀಲ ಸೋಲಿಸಲು ಹೊರಟಿದ್ರು. ಆದರೆ ದಕ್ಷಿಣ ಕ್ಷೇತ್ರದ ಜನರು ತಮ್ಮ ಮನೆ ಮಗನಿಗೆ ಗೆಲ್ಲಿಸಿದ್ದಾರೆ. ನನ್ನ ಸೋಲಿಸಲು ಎಷ್ಟೇ ಪ್ರಯತ್ನಗಳು ನಡೆದು ಫಲಿತಾಂಶ ನಿಮ್ಮ ಮುಂದೆ ಇದೆ. ಕಳೆದ ಒಂದು ವರ್ಷದಿಂದ ನನ್ನು ಸೋಲಿಸಲು ಪ್ರಯತ್ನ ನಡೆದಿತ್ತು. ಎಷ್ಟೇ ಧಮ್ಕಿ ಕೊಟ್ರು ಜನ ಮಾತ್ರ ನನ್ನ ಕೈ ಬಿಡಲಿಲ್ಲ ಎಂದು ಹೇಳಿದರು.
ಗೆದ್ದ ಅಭ್ಯರ್ಥಿಗಳ ಬೆಂಬಲಿಗರ ಹರ್ಷೋದ್ಘಾರ: ತೀವ್ರ ಹಣಾಹಣಿಯಲ್ಲಿ ಗೆದ್ದು ಬೀಗಿರುವ ಅಭ್ಯರ್ಥಿಗಳ ಬೆಂಬಲಿಗರು ತಮ್ಮ ನಾಯಕನ ಗೆಲುವು ಸ್ಪಷ್ಟವಾಗುತ್ತಿದ್ದಂತೆ ಗುಲಾಲು ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಒಟ್ಟಾರೆ ರಾಜ್ಯದಲ್ಲಿ ಸರ್ಕಾರ ರಚನೆಯಲ್ಲಿ ಬೆಳಗಾವಿ ಜಿಲ್ಲೆ ಮತ್ತೆ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಇದನ್ನೂ ಓದಿ:ಬೊಮ್ಮಾಯಿ ಸಂಪುಟದ 12 ಸಚಿವರಿಗೆ ಸೋಲು!