ಬೆಳಗಾವಿ: ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಸಿದ್ಧತೆ ಆರಂಭಿಸಿದೆ. ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಗಳಿಗಾಗಿ ಹುಡುಕಾಟ ಶುರುವಾಗಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಂದ ಹಲವು ನಾಯಕರ ಹೆಸರುಗಳು ಸಹ ಮುಂಚೂಣಿಗೆ ಬಂದಿದೆ.
![ಲಕ್ಷ್ಮೀ ಹೆಬ್ಬಾಳ್ಕರ್](https://etvbharatimages.akamaized.net/etvbharat/prod-images/10-01-2024/20476052_laxmi.jpg)
ಬೆಳಗಾವಿ ಲೋಕಸಭೆ ಕ್ಷೇತ್ರವು ಬಿಜೆಪಿಯ ಭದ್ರಕೋಟೆ. ಕಳೆದ ನಾಲ್ಕು ಅವಧಿಯಲ್ಲಿ ಬಿಜೆಪಿಯಿಂದ ದಿ.ಸುರೇಶ ಅಂಗಡಿ ಸತತವಾಗಿ ಗೆಲುವು ದಾಖಲಿಸಿದ್ದರು. ಅವರ ಅಕಾಲಿಕ ಅಗಲಿಕೆಯಿಂದ ನಡೆದ ಉಪಚುನಾವಣೆಯಲ್ಲಿ ಪತ್ನಿ ಮಂಗಲಾ ಅಂಗಡಿ ಜಯ ಸಾಧಿಸುವ ಮೂಲಕ ಬಿಜೆಪಿ ತನ್ನ ಕ್ಷೇತ್ರ ಉಳಿಸಿಕೊಂಡಿತ್ತು. ಆದರೆ, ಈಗ ಬದಲಾದ ರಾಜಕೀಯದಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಆಡಳಿತದ ಚುಕ್ಕಾಣಿ ಹಿಡಿದಿದೆ. ಇದರಿಂದ ಬಿಜೆಪಿಯಲ್ಲೂ ಹೊಸ ಲೆಕ್ಕಾಚಾರ ಪ್ರಾರಂಭವಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
![ಮಹಾಂತೇಶ ಕವಟಗಿಮಠ](https://etvbharatimages.akamaized.net/etvbharat/prod-images/10-01-2024/20476052_kavatagimatt.jpg)
ಬಿಜೆಪಿಗೆ ಜಿಲ್ಲಾ ರಾಜಕೀಯದ ಮೇಲೆ ಬಿಗಿದೆ. ಆದರೆ, ಪ್ರಸ್ತುತ ಪಕ್ಷದಲ್ಲಿ ಬಣ ರಾಜಕೀಯ ಉಂಟಾಗಿದೆ. ಲೋಕಸಭೆ ಚುನಾವಣೆಗೆ ಒಮ್ಮತದ ಅಭ್ಯರ್ಥಿ ಆಯ್ಕೆ ಹೈಕಮಾಂಡ್ಗೆ ತಲೆ ಬಿಸಿ ಆಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಮೂಲಗಳ ಪ್ರಕಾರ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಈ ಬಾರಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಇದರಿಂದ ಕಾಂಗ್ರೆಸ್ನಿಂದ ಯಾರೇ ಸ್ಪರ್ಧಿಸಿದರೂ ಗೆಲುವು ಕಷ್ಟ ಆಗಲಾರದು ಎಂಬುದು ಒಂದು ಬಣದ ಲೆಕ್ಕಾಚಾರ. ಇದೇ ವೇಳೆ, ಜಾತಿ ಲೆಕ್ಕಾಚಾರದಿಂದ ಲಿಂಗಾಯತ ಸಮುದಾಯದ ಮಹಾಂತೇಶ ಕವಟಗಿಮಠ, ಈರಣ್ಣ ಕಡಾಡಿ, ಮರಾಠಾ ಸಮುದಾಯದಿಂದ ಅನಿಲ ಬೆನಕೆ ತಮಗೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.
![ಸತೀಶ್ ಜಾರಕಿಹೊಳಿ](https://etvbharatimages.akamaized.net/etvbharat/prod-images/10-01-2024/20476052_satish.jpg)
ಕಾಂಗ್ರೆಸ್ ತಂತ್ರವೇನು?: ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಶತಾಯಗತಾಯ ಬೆಳಗಾವಿ ಮತ್ತು ಚಿಕ್ಕೋಡಿ ಎರಡೂ ಲೋಕಸಭೆ ಕ್ಷೇತ್ರಗಳನ್ನೂ ತೆಕ್ಕೆಗೆ ತೆಗೆದುಕೊಳ್ಳುವ ಗುರಿ ಹೊಂದಿದೆ. ಜಿಲ್ಲೆಯಲ್ಲಿ 11 ಕಾಂಗ್ರೆಸ್ ಶಾಸಕರು ಗೆದ್ದು ಬಂದಿದ್ದಾರೆ. ರಾಜ್ಯದಲ್ಲಿ ಸರ್ಕಾರವೂ ಇದೆ. ಹೀಗಾಗಿ ಉಭಯ ಕ್ಷೇತ್ರಗಳಿಗೆ ಕೈ ಪಡೆ ತಂತ್ರವನ್ನು ರೂಪಿಸುತ್ತಿದೆ. ಸತೀಶ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಇಬ್ಬರು ಸಚಿವರಿದ್ದು, ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿನ ಹೊಣೆ ಇವರ ಮೇಲಿದೆ.
![ಬಾಲಚಂದ್ರ ಜಾರಕಿಹೊಳಿ](https://etvbharatimages.akamaized.net/etvbharat/prod-images/10-01-2024/20476052_balachandra.jpg)
ಇದೇ ವೇಳೆ, ಸತೀಶ ಜಾರಕಿಹೊಳಿ ಇಲ್ಲವೇ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪರ್ಧಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಇಬ್ಬರೂ ತಮ್ಮದೇ ಆದ ಜಾತಿ ಪ್ರಾಬಲ್ಯ, ವರ್ಚಸ್ಸು ಮತ್ತು ಅನುಭವ ಹೊಂದಿದ್ದು, ಕಣದಲ್ಲಿ ಪ್ರಬಲ ಅಭ್ಯರ್ಥಿಗಳು ಆಗಬಹುದು ಎಂಬುದು ರಾಜಕೀಯ ವಿಶ್ಲೇಷಕರ ಮಾತು. ಇವರಲ್ಲದೇ ಕಾಂಗ್ರೆಸ್ನಿಂದ ಕಿರಣ್ ಸಾಧುನವರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್,
ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಹೆಸರುಗಳು ಸಹ ಹರಿದಾಡುತ್ತಿವೆ.
![ಮಂಗಲಾ ಅಂಗಡಿ](https://etvbharatimages.akamaized.net/etvbharat/prod-images/10-01-2024/20476052_mangala.jpg)
ಮತ್ತೊಂದೆಡೆ, ಸತೀಶ ಜಾರಕಿಹೊಳಿ ಬೆಳಗಾವಿ ಕ್ಷೇತ್ರದಲ್ಲಿ ಲಿಂಗಾಯತ, ಚಿಕ್ಕೋಡಿ ಕ್ಷೇತ್ರದಲ್ಲಿ ಕುರುಬ ಸಮುದಾಯಕ್ಕೆ ಪಕ್ಷದ ಟಿಕೆಟ್ ನೀಡಬೇಕೆಂಬ ನಿಲುವು ಪ್ರಕಟಿಸಿದ್ದಾರೆ. ಹಾಗಾಗಿ, ಲಿಂಗಾಯತ ಸಮುದಾಯದ ಯಾವ ಕಾಂಗ್ರೆಸ್ ನಾಯಕರಿಗೆ ಟಿಕೆಟ್ ಸಿಗುತ್ತೆ ಎಂಬುದು ತೀವ್ರ ಕುತೂಹಲ ಮೂಡಿಸಿದ್ದು, ಅಂತಿಮವಾಗಿ ಅಳೆದು ತೂಗಿ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತದೆ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: ಬೆಳಗಾವಿ ಎಂದೆಂದಿಗೂ ಕರ್ನಾಟಕದ ಅವಿಭಾಜ್ಯ ಅಂಗ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್